
.
ಬೆಂಗಳೂರು: ವಿದೇಶಿ ಶೈಲಿಯಲ್ಲಿ ಪ್ರೇಮ ನಿವೇದನೆ ಮಾಡುವ ನೆಪವೊಡ್ಡಿ ಯುವತಿಯೊಬ್ಬಳು ಪ್ರಿಯಕರನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ-ಕಾಲುಗಳಿಗೆ ಹಗ್ಗ ಕಟ್ಟಿ, ಅರೆಬೆತ್ತಲೆಗೊಳಿಸಿ ಬಳಿಕ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ ಭೀಕರ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾನಗರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಕಿರಣ್ (27) ಸಜೀವ ದಹನವಾದ ಯುವಕ. ಪ್ರಿಯಕರನನ್ನ ಹತ್ಯೆಗೈದ ಆರೋಪದಡಿ ಯುವತಿ ಪ್ರೇಮಾ ಎಂಬಾಕೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಅಂಜನಾನಗರದಲ್ಲಿರುವ ಯುವತಿ ಮನೆಯಲ್ಲಿ ಮಧ್ಯಾಹ್ನ ಕೃತ್ಯ ನಡೆದಿದೆ. ತುಮಕೂರಿನ ಚಿಕ್ಕನಾಯಕಹಳ್ಳಿಯ ಕಿರಣ್ ನಗರದಲ್ಲಿ ವಾಸವಾಗಿದ್ದು, ರಾಜಾಜಿನಗರದ ವಿಐ ಸ್ಟೋರ್ನಲ್ಲಿ ಸಿಮ್ ಮಾರಾಟ ಕೆಲಸ ಮಾಡುತ್ತಿದ್ದ. ಇದೇ ಕಂಪೆನಿಯಲ್ಲಿ ಯುವತಿ ಪ್ರೇಮಾ ಕೂಡ ಕೆಲಸ ಮಾಡುತ್ತಿದ್ದಳು. ಎರಡು ವರ್ಷಗಳ ಪರಿಚಯ ಕ್ರಮೇಣ ಇಬ್ಬರ ನಡುವೆ ಪ್ರೀತಿಗೆ ತಿರುಗಿತ್ತು. ಒಟ್ಟಿಗೆ ಓಡಾಡಿಕೊಂಡಿದ್ದ ಜೋಡಿ ಮಧ್ಯೆ ಇತ್ತೀಚೆಗೆ ವಿರಸ ಮೂಡಿತ್ತು. ಈ ವೇಳೆ ಕಿರಣ್, ಪ್ರೇಮಾಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದ. ಇದರಿಂದ ಯುವತಿ ಮನನೊಂದಿದ್ದಳು. ಪ್ರಿಯಕರನಿಗೆ ಒಂದು ಗತಿ ಕಾಣಿಸಲು ಒಳಸಂಚು ರೂಪಿಸಿ, ತನ್ನ ತಾಯಿ ಹಾಗೂ ಸಹೋದರ ಕೆಲಸಕ್ಕೆ ಹೋದ ಬಳಿಕ ಪ್ರಿಯಕರನಿಗೆ ಪೋನ್ ಮಾಡಿ ಮನೆಗೆ ಬರುವಂತೆ ಕೇಳಿಕೊಂಡಿದ್ದಳು.
ನೆಲಮಂಗಲಕ್ಕೆ ಹೋಗಬೇಕಿದ್ದ ಕಿರಣ್, ಅಂಜನಾನಗರದ ಯುವತಿಯ ಮನೆಗೆ ಬಂದಿದ್ದ. ಮನೆಗೆ ಬಂದ ಪ್ರಿಯಕರನನ್ನು ಪ್ರೀತಿಯಿಂದ ಬರಮಾಡಿಕೊಂಡ ಯುವತಿ ವಿದೇಶಿ ಶೈಲಿಯಲ್ಲಿ ಪ್ರೇಮ ನಿವೇದನೆ ಮಾಡುವುದಾಗಿ ಇಂಗಿತ ವ್ಯಕ್ತಪಡಿಸಿದ್ದಳು. ಈಕೆಯ ಮಾತನ್ನು ಕಿರಣ್ ನಂಬಿದ್ದ. ಪೂರ್ವಸಂಚಿನಂತೆ ಆತನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ ಕಾಲುಗಳಿಗೆ ಹಗ್ಗ ಕಟ್ಟಿದ್ದಳು. ಯಾಕೆ ಬಿಗಿಯಾಗಿ ಕಟ್ಟುತ್ತೀಯಾ ಎಂದು ಕೇಳಿದಾಗ, ಇದು ವಿದೇಶಿ ಶೈಲಿಯ ಪ್ರೇಮ ನಿವೇದನೆ ಎಂದು ಹೇಳಿದ್ದಳು. ಬಳಿಕ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಳು. ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ವಿಫಲನಾದ ಕಿರಣ್, ಸ್ಥಳದಲ್ಲಿ ಬೆಂಕಿ ಆವರಿಸಿಕೊಂಡು ನೋಡ-ನೋಡುತ್ತಿದ್ದಂತೆ ಸುಟ್ಟು ಸಜೀವ ದಹನವಾಗಿದ್ದಾನೆ. ಈತನ ಕೂಗಾಟ ಚೀರಾಟ ಕೇಳಿ ಮತ್ತು ಬೆಂಕಿ ಹೊಗೆ ಹೆಚ್ಚಾದಂತೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ದೌಡಾಯಿಸಿದ್ದರು. ಆರಂಭದಲ್ಲಿ ಕಿರಣ್, ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ಶಂಕಿಸಿದ್ದರು. ತನಿಖೆ ಮುಂದುವರಿಸಿದಾಗ ಯುವತಿ ಕೃತ್ಯ ಬಯಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೃತ್ಯ ಎಸಗಲಾಗಿದೆ. ಪ್ರೇಮಿಗಳ ನಡುವೆ ಯಾವ ಕಾರಣಕ್ಕೆ ಗಲಾಟೆ ನಡೆದು, ಕೃತ್ಯ ಎಸಗಲಾಗಿದೆ, ಕೃತ್ಯದ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಕಿರಣ್ ಇತ್ತೀಚೆಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದಾಗಿ ಭಾವಿಸಿ ಯುವತಿ ಸೀಮೆಎಣ್ಣೆ ಸುರಿದು ಕೊಲೆ ಮಾಡಿದ್ದಾಳೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಿಯಕರನ ಕೊಲೆ ಮಾಡುವ ಉದ್ದೇಶದಿಂದ ಯುವತಿ ಮೊದಲೇ ಸೀಮೆಎಣ್ಣೆ ಖರೀದಿಸಿ ಮನೆಗೆ ತಂದಿಟ್ಟುಕೊಂಡಿದ್ದಳು. ಹಗ್ಗ ಬಿಗಿದ ಮೇಲೆ ಪ್ರಿಯಕರನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ. ಯುವಕ ನರಳಾಡುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಯುವತಿ ಚಿತ್ರೀಕರಿಸಿಕೊಂಡಿದ್ದಾಳೆ. ಯುವತಿಯ ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾನು ಶೌಚಾಲಯಕ್ಕೆ ತೆರಳಿದ್ದೆ. ಆಗ ಜೋರು ಶಬ್ದ ಕೇಳಿಸಿತು. ಹೊರಗೆ ಬಂದೆ. ಅಷ್ಟರಲ್ಲಿ ಕಿರಣ್ ಬೆಂಕಿ ಹಚ್ಚಿಕೊಂಡಿದ್ದರು ಎಂಬುದಾಗಿ ಯುವತಿ ಹೇಳಿಕೆ ನೀಡಿದ್ದರು. ಯುವತಿಯ ಹೇಳಿಕೆಯಲ್ಲಿ ಗೊಂದಲವಿತ್ತು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲಿಸಿದಾಗ ಕಿರಣ್ ಬೈಕ್‌ನಲ್ಲಿ ಬಂದಾಗ ಅವರ ಕೈಯಲ್ಲಿ ಯಾವುದೇ ಕ್ಯಾನ್ ಇರಲಿಲ್ಲ ಎಂಬುದು ಗೊತ್ತಾಯಿತು. ತಕ್ಷಣವೇ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ರಹಸ್ಯ ಬಯಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.