ಕುದುರೆಮುಖ ರಾಷ್ಟ್ರೀಯ ವ್ಯಾಪ್ತಿಯ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ: ಕುತ್ಲೂರು–ನಾವೂರು ಪ್ರದೇಶಗಳಿಗೆ ಭೂಗತ ಕೇಬಲ್ ಮೂಲಕ ವಿದ್ಯುತ್ ಪೂರೈಕೆಗೆ ಅನುಮೋದನೆ:

 

 

 

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಬದುಕುತ್ತಿರುವ ಕುತ್ಲೂರು ಹಾಗೂ ನಾವೂರು ಪ್ರದೇಶಗಳ 58 ಕುಟುಂಬಗಳಿಗೆ ಇದೀಗ ವಿದ್ಯುತ್ ಸಂಪರ್ಕದ ನಿರೀಕ್ಷೆ ಮೂಡಿದೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ನಿರಂತರ ಪ್ರಯತ್ನದ ಫಲವಾಗಿ, ಕರ್ನಾಟಕ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 91ನೇ ಸಭೆಯಲ್ಲಿ ಕೆಲವು ಷರತ್ತುಗಳಿಗೆ ಒಳಪಟ್ಟು ಈ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅನುಮೋದನೆ ನೀಡಲಾಗಿದೆ.

ಅನುಮೋದನೆಯನ್ವಯ ನಾವೂರು ಭಾಗದ 26 ಹಾಗೂ ಕುತ್ಲೂರು ಭಾಗದ ಸುಮಾರು 32 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಾಧ್ಯತೆ ತೆರೆದುಕೊಂಡಿದೆ. ಜನವಸತಿ ಪ್ರದೇಶಗಳಿಗೆ 11 ಕೆವಿ ವಿದ್ಯುತ್ ವಿತರಣಾ ಮಾರ್ಗವನ್ನು ಭೂಗತ ಕೇಬಲ್ ಮೂಲಕ ಅಳವಡಿಸುವ ಕುರಿತು ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ, ವಿದ್ಯುತ್ ಸಂಪರ್ಕ ಕಾಮಗಾರಿಗೆ ಅಗತ್ಯವಿರುವ ಅನುದಾನವನ್ನು ಮೀಸಲಿಡುವಂತೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನೇತೃತ್ವದ ನಿಯೋಗವು ಸೆ. 2ರಂದು ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ನೇತೃತ್ವದಲ್ಲಿ ಸಚಿವರನ್ನು ಭೇಟಿಯಾದ ನಿಯೋಗವು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಜನವಸತಿ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯವಿರುವ ಅನುದಾನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಮನವಿ ಮಾಡಿತು.

ಮನವಿಗೆ ಸ್ಪಂದಿಸಿದ ಸಚಿವ ಕೆ.ಜೆ. ಜಾರ್ಜ್, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಜನರಿಗೆ ವಿದ್ಯುತ್ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯವಿರುವ ಅನುದಾನವನ್ನು ಮೀಸಲಿಡುವುದಾಗಿ ಭರವಸೆ ನೀಡಿದರು.

ಬಳಿಕ ನಿಯೋಗವು ಅರಣ್ಯ ಭವನಕ್ಕೆ ಭೇಟಿ ನೀಡಿ ಹಿರಿಯ ಅರಣ್ಯ ಅಧಿಕಾರಿಗಳೊಂದಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕುರಿತು ಚರ್ಚೆ ನಡೆಸಿತು.

ಈ ಸಂದರ್ಭದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ, ಸಂಚಾಲಕ ಶೇಖರ್ ಲಾಯಿಲ, ಮುಖಂಡರಾದ ಸುಧಾಕರ ಕುತ್ಲೂರು, ಪ್ರಶಾಂತ್ ಕುತ್ಲೂರು, ಸಂತೋಷ್ ಕಲ್ಲಂಡ ನಾವರ, ವಸಂತ ಹಿತ್ತಿಲಪೇಲ, ನಾಗೇಶ್ ಸವಣಾಲು, ಶೇಖರ ಕಂಬುಜೆ ನಡ, ಲೋಕೇಶ್ ಕುದ್ಕೊಲಿ ನಡ, ವಸಂತ ಕಂಬುಜೆ ನಡ, ನವೀನ್ ಪುಲಿತ್ತಡಿ ನಾವೂರು ಹಾಗೂ ನಿರಂಜನ್ ಆಯಿಲ ಉಪಸ್ಥಿತರಿದ್ದರು.

error: Content is protected !!