
ಬೆಳ್ತಂಗಡಿ: ಕುಂಡದಬೆಟ್ಟು ಮುಹಿಯುದ್ದೀನ್ ಜುಮ್ಮಾ ಮಸ್ಟಿದ್ ನಿಟ್ಟಡೆ, ಕುಂಡದಬೆಟ್ಟು ದರ್ಗಾ ವಠಾರದಲ್ಲಿ ಮರ್‌ಹೂಮ್ ಇಬ್ರಾಹಿಂ ಉಸ್ತಾದ್ ಇವರ ಹೆಸರಿನಲ್ಲಿ ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವ ಕುಂಡದಬೆಟ್ಟು ಮಖಾಂ ಊರೂಸ್ ಎ. 24 ರಿಂದ 26ರ ವರೆಗೆ ನಡೆಯಲಿದೆ ಎಂದು ಕುಂಡದಬೆಟ್ಟು ಎಂ ಜೆ ಎಂ ಖತೀಬ್ ಮುಹಮ್ಮದ್ ಹನೀಫ್ ಸಖಾಫಿ ಹೇಳಿದರು.
ಅವರು ಎ. 22ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಎ. 24 ರಂದು ರಾತ್ರಿ ಉರೂಸ್ ಸಮಿತಿ ಅಧ್ಯಕ್ಷ ಅಬುಸಾಲಿ ಜಿ. ಧ್ವಜಾರೋಹಣ ಮಾಡಲಿದ್ದಾರೆ. ಕಾವಳಕಟ್ಟೆ ಡಾ. ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ದುಆ ಆಶೀರ್ವಚನ ಮಾಡುವರು. ಕೇರಳದ ಖಾಸಿಂ ಕಾಮಿಲ್ ಸಖಾಫಿ ಸಂಗಡಿಗರಿಂದ ಗ್ರ್ಯಾಂಡ್ ಇಶಲ್ ನೈಟ್ ನಡೆಯಲಿದೆ.
ಎ. 25 ರಂದು ಕರ್ನಾಟಕ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಎನ್. ಕೆ. ಎಂ. ಶಾಫಿ ಸಅದಿ ಉದ್ಘಾಟನೆ ಮಾಡುವರು. ಕಾಸರಗೋಡು ಊಜಂಪಾಡಿ ಖತೀಬ್ ಪಿ. ಎಸ್. ಮುಹಮ್ಮದ್ ಹಾಶಿರ್ ಸಖಾಫಿ ಆಲ್ ಸುರೈಜಿ ಪ್ರಧಾಬ ಭಾಷಣ ಮಾಡಲಿದ್ದಾರೆ.
ಎ. 26 ರಂದು ಸಂಜೆ ಸೌಹಾರ್ದ ಸ್ನೇಹ ಸಂಗಮ ನಡೆಯಲಿದೆ. ಅಧ್ಯಕ್ಷತೆಯನ್ನು ಕುಂಡದಬೆಟ್ಟು ಎಂ ಜೆ ಎಂ ಅಧ್ಯಕ್ಷ ಮುತ್ತಲಿಬ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು. ಟಿ. ಖಾದರ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ. ಎ. ಗಫೂರ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
ರಾತ್ರಿ ಉರೂಸ್ ಸಮಾರೋಪ ಸಮಾರಂಭದಲ್ಲಿ ದ. ಕ. ಜಿಲ್ಲೆ ಸುನ್ನಿ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ ಸಯ್ಯಿದ್ ಸಾದಾತ್ ತಂಙಳ್ ದುಆ ಆಶೀರ್ವಚನ ಮಾಡುವರು. ತೃಶೂರಿನ ಮುಳ್ಳೂರುಕೆರೆ ಮುಹಮ್ಮದಲಿ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಅವರು ಹೇಳಿದರು. ಕಾರ್ಯಕ್ರಮಗಳು ಉದಯಾಸ್ತಮಾನ ರೀತಿಯಲ್ಲಿ ಅಪರಾಹ್ನ 3 ಕ್ಕೆ ಆರಂಭವಾಗಿ ರಾತ್ರಿ 10 ಕ್ಕೆ ಮುಕ್ತಾಯಗೊಳ್ಳಲಿದೆ. ಕೊನೇಯ ದಿನ ಅನ್ನದಾನ ಕೂಡ ನಡೆಯಲಿದೆ.
ಪತ್ರಿಕಾ ಗೋಷ್ಠಿಯಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಅಬುಸಾಲಿ ಜಿ., ಕುಂಡದಬೆಟ್ಟು ಎಂ ಜೆ ಎಂ ಅಧ್ಯಕ್ಷ ಮುತ್ತಲಿಬ್, ಕುಂಡದ ಬೆಟ್ಟು ಮದರಸದ ಸಹ ಅಧ್ಯಾಪಕ ಬಿ. ಹೆಚ್. ಹಾರಿಸ್ ಸಖಾಫಿ ಉಪಸ್ಥಿತರಿದ್ದರು.