
ಬೆಳ್ತಂಗಡಿ, : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಾವೂರು ಹಾಗೂ ಕುತ್ಲೂರು ಗ್ರಾಮಗಳ ದುರ್ಗಮ ಪ್ರದೇಶಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸುವ ಬಹುಕಾಲದ ಬೇಡಿಕೆಗೆ ಇದೀಗ ಅನುಮತಿ ದೊರೆತಿದೆ. 11 ಕೆ.ವಿ. ವಿದ್ಯುತ್ ವಿತರಣಾ ಮಾರ್ಗವನ್ನು ಭೂಗತ ಕೇಬಲ್ ಮೂಲಕ ಅಳವಡಿಸಲು ಅಗತ್ಯ ವನ್ಯಜೀವಿ ಅನುಮತಿ ನೀಡಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ನಾವೂರು ಗ್ರಾಮದ ಪುಳಿತ್ತಡಿ, ಎರ್ಮಲೆ ಹಾಗೂ ಕಾಸ್ರೋಳಿ ಎಸ್‌ಟಿ ಕಾಲೋನಿಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ 0.3189 ಹೆಕ್ಟೇರ್ ಪ್ರದೇಶದಲ್ಲಿ 11 ಕೆ.ವಿ. ಮಾರ್ಗ ಅಳವಡಿಸಲು ಅನುಮತಿ ನೀಡಲಾಗಿದೆ. ಕುತ್ಲೂರು ಗ್ರಾಮದ ಬರೆಂಗಡಿ, ಅಂಜರೊಟ್ಟು, ಎರ್ಡಾಡಿ, ನಂಗಾಜೆ, ಪಂಜಾಳ, ಕೊಟ್ಟೆಂದಡ್ಕ, ಅಳಂಬ ಹಾಗೂ ಬಾರ್ಥಾಜೆ ಪ್ರದೇಶಗಳಿಗೆ ವಿದ್ಯುತ್ ಕಲ್ಪಿಸುವ ಉದ್ದೇಶದಿಂದ 0.8356 ಹೆಕ್ಟೇರ್ ಪ್ರದೇಶದಲ್ಲಿ ಭೂಗತ ಕೇಬಲ್ ಅಳವಡಿಸುವ ಯೋಜನೆಗೂ ಅನುಮೋದನೆ ದೊರೆತಿದೆ.
ಎರಡೂ ಯೋಜನೆಗಳನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 91ನೇ ಸಭೆಯಲ್ಲಿ ಪರಿಗಣಿಸಿ ಶಿಫಾರಸು ಮಾಡಲಾಗಿತ್ತು. ಅದರಂತೆ ವನ್ಯಜೀವಿ ಅನುಮತಿ ದೊರೆತಿದ್ದು, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಅರಣ್ಯ ಇಲಾಖೆಯ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆಯಲ್ಲಿ ಕಾಮಗಾರಿ ನಡೆಸಬೇಕು. ಕಾಮಗಾರಿಯನ್ನು ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯೊಳಗೆ ಮಾತ್ರ ಕೈಗೊಳ್ಳುವಂತೆ ಸೂಚಿಸಲಾಗಿದೆ.
ದುರ್ಗಮ ಪ್ರದೇಶಗಳ ಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಂಬಂಧಪಟ್ಟ ಇಲಾಖೆಗಳು ಹಾಗೂ ಅಧಿಕಾರಿಗಳೊಂದಿಗೆ ನಿರಂತರ ಪ್ರಯತ್ನ ನಡೆಸಲಾಗಿತ್ತು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ. “ಅಭಿವೃದ್ಧಿಯ ಹಾದಿಯಲ್ಲಿ ಯಾವುದೇ ಗ್ರಾಮ, ಮನೆ ಹಾಗೂ ಕುಟುಂಬ ಹಿಂದುಳಿಯಬಾರದು ಎಂಬುದು ನಮ್ಮ ಬದ್ಧತೆ,” ಎಂದು ಅವರು ಹೇಳಿದ್ದಾರೆ.
ಅಗತ್ಯ ಇಲಾಖಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಮೆಸ್ಕಾಂ ವತಿಯಿಂದ ಎರಡೂ ಯೋಜನೆಗಳ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಆರಂಭಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಯೋಜನೆಗಳಿಗೆ ಅನುಮತಿ ದೊರಕಿಸುವಲ್ಲಿ ಸಹಕರಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು, ಅರಣ್ಯ ಮತ್ತು ವನ್ಯಜೀವಿ ಇಲಾಖೆ, ಮೆಸ್ಕಾಂ ಹಾಗೂ ಅಧಿಕಾರಿಗಳಿಗೆ ಶಾಸಕರು ಕೃತಜ್ಞತೆ ಸಲ್ಲಿಸಿದ್ದಾರೆ.