
ಬೆಳ್ತಂಗಡಿ : ‘2008 ರಲ್ಲಿ ಆರಂಭಗೊಂಡ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ, ಬೆಳ್ತಂಗಡಿ ಕಳೆದ 17 ವರ್ಷಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕಾರ್ಯವ್ಯಾಪ್ತಿಯಲ್ಲಿ 27 ಶಾಖೆಗಳನ್ನು ಹೊಂದಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದೆ. 2025-26 ಆರ್ಥಿಕ ವರ್ಷದಲ್ಲಿ ಒಟ್ಟು ₹. 1953.29 ಕೋಟಿ ವ್ಯವಹಾರ ನಡೆಸಿ ₹. 5.85 ಕೋಟಿ ನಿವ್ವಳ ಲಾಭ ಗಳಿಸಿದೆ’ ಎಂದು ಸಂಘದ ಅಧ್ಯಕ್ಷ ಭಗೀರಥ ಜಿ ಹೇಳಿದರು.

ಅವರು ಸಹಕಾರಿ ಸಂಘದ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಂಘದಲ್ಲಿ ಪ್ರಸ್ತುತ 34, 886 ಸದಸ್ಯರಿದ್ದು, ₹. 326.34 ಕೋಟಿ ಠೇವಣಿ ಸಂಗ್ರಹ ಮಾಡಲಾಗಿದೆ. ₹. 70.11 ಕೋಟಿ ಹೂಡಿಕೆ ಮಾಡಲಾಗಿದ್ದು ₹. 269.42 ಕೋಟಿ ಸಾಲ ನೀಡಿ 97.68% ಸಾಲ ವಸೂಲಾತಿ ಮಾಡಲಾಗಿದೆ. ಸಹಕಾರಿ ಕ್ಷೇತ್ರದಲ್ಲಿಯೇ ವಿಶೇಷ ಎಂಬಂತೆ ಸಾಲಗಾರ ಸದಸ್ಯರು ಮರಣ ಹೊಂದಿದಲ್ಲಿ ಅಥವಾ ಅವಘಡದಿಂದ ಶಾಶ್ವತ ಅಂಗವಿಕಲತೆಯಾದಲ್ಲಿ ಅಂತಹ ಸದಸ್ಯರ ಕಷ್ಟಕ್ಕೆ ಸ್ಪಂದಿಸಿ ಶ್ರೀ ಗುರು ಸಾಲಗಾರರ ಮರಣ ನಿಧಿಯಿಂದ ಒಟ್ಟು 119 ಜನಕ್ಕೆ ₹ 88,18,140 ಮೊತ್ತದ ಮರಣ ನಿಧಿಯನ್ನು ನೀಡಿ ಸಾಲದಿಂದ ಋಣಮುಕ್ತಗೊಳಿಸಲಾಗಿದೆ ‘ಎಂದು ತಿಳಿಸಿದರು.

‘ಸಂಘದಲ್ಲಿ ಗ್ರಾಹಕರಿಗೆ ಶೀಘ್ರದಲ್ಲಿ ಚಿನ್ನಾಭರಣ ಸಾಲ, ಈ ಸ್ಟಾಂಪಿಂಗ್ ಸೌಲಭ್ಯ, ಆಕರ್ಷಕ ಬಡ್ಡಿ ದರದಲ್ಲಿ ಠೇವಣಿಗಳ ಸ್ವೀಕಾರ, ಪಿಂಚಣಿ, ವಿದ್ಯಾಭ್ಯಾಸ, ಹಾಗೂ ಹೆಣ್ಣು ಮಕ್ಕಳ ಮದುವೆಗೆ ಸಹಕಾರ ನೀಡುವ ಆಕರ್ಷಕ ಠೇವಣಿ ಯೋಜನೆಗಳು, ಹಿರಿಯ ನಾಗರಿಕರು, ವಿಧವೆಯರು, ದಿವ್ಯಾಂಗರು ಹಾಗೂ ಸಂಘ ಸಂಸ್ಥೆಗಳಿಗೆ ಶೇ.0.5 ಹೆಚ್ಚುವರಿ ಬಡ್ಡಿ, ದೇಶಾದ್ಯಂತ ಪಾವತಿಯಾಗುವ ಮಲ್ಟಿಸಿಟಿ ಚೆಕ್ ಮತ್ತು ಡಿ.ಡಿ ಸೌಲಭ್ಯ, ವೆಸ್ಟರ್ನ್ ಯೂನಿಯನ್, ಎಕ್ಸ್ಪ್ರೆಸ್ ಮನಿ, ರಿಯಾ ಮನಿ ಟ್ರಾನ್ಸ್ ಫರ್ ಮುಖಾಂತರ ವಿದೇಶಿ ಹಣ ವರ್ಗಾವಣೆ ಸೌಲಭ್ಯ, ಆರ್.ಟಿ.ಜಿ.ಎಸ್ ಹಾಗೂ ನೆಪ್ಟ್ ಸೌಲಭ್ಯ, ಸೇಫ್ ಲಾಕರ್ ಸೌಲಭ್ಯ, ಇಪ್ಕೋ ಟೋಕಿಯೋ ವಿಮಾ ಸೌಲಭ್ಯ, ಪಹಣಿ ಪತ್ರ ಮುಂತಾದ ಅನೇಕ ಸೌಲಭ್ಯಗಳಿವೆ. ಇನ್ನು ಮುಂದಿನ ದಿನಗಳಲ್ಲಿ ಕ್ಯೂ ಆರ್ ಕೋಡ್, ನ್ಯಾಚ್, ಇ – ಕಲೆಕ್ಷನ್ ತಂತ್ರಜ್ಞಾನವನ್ನು ಅಳವಡಿಸಲಾಗುವುದು’ ಎಂದು ತಿಳಿಸಿದರು.
‘ಸಂಘವು ಕೇವಲ ಬ್ಯಾಂಕಿಂಗ್ ಚಟುವಟಿಕೆ ಮಾತ್ರವಲ್ಲದೆ 3 ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪೂರ್ಣ ಖರ್ಚುವೆಚ್ಚ ಭರಿಸಿ ಅವರಿಗೆ ಉತ್ತಮ ಉದ್ಯೋಗ ಸಿಗುವಂತೆ ಮಾಡಲಾಗಿದೆ. ಒಬ್ಬರು ಮೆಡಿಕಲ್ ವಿದ್ಯಾರ್ಥಿಯ ಆಂಶಿಕ ವೆಚ್ಚವನ್ನು ಭರಿಸಲಾಗಿದೆ. ಆಯ್ದ ಪದವಿ ವ್ಯಾಸಂಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ನೆರವು, ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಸ್ಥಳೀಯ ಸಂಘ ಸಂಸ್ಥೆಗಳ ಜತೆ ಆರೋಗ್ಯ ಶಿಬಿರ, ಉಚಿತ ಕನ್ನಡಕ ವಿತರಣೆ ಮುಂತಾದ ಸಾಮಾಜಿಕ ಕಾರ್ಯಗಳನ್ನು ಮಾಡಲಾಗಿದೆ. ಶ್ರೀ ಗುರುಕೃಪಾ ಎಜುಕೇಶನ್ ಟ್ರಸ್ಟ್ ಬಲ್ಯೊಟ್ಟು ಇಲ್ಲಿಗೆ ₹ 2 ಲಕ್ಷ ವಿದ್ಯಾನಿಧಿ ನಿರಂತರವಾಗಿ ನೀಡಲಾಗುವುದು. ಈ ಆರ್ಥಿಕ ವರ್ಷದಲ್ಲಿ ಅರ್ಹ ಫಲಾನುಭವಿಯನ್ನು ಗುರುತಿಸಿ ಮನೆ ನಿರ್ಮಿಸಿಕೊಡುವ ಉದ್ದೇಶವನ್ನು ಹೊಂದಲಾಗಿದೆ’ ಎಂದರು.
ರಾಜ್ಯ ಮಟ್ಟದ ಅತ್ಯುತ್ತಮ ಸಹಕಾರಿ ಸಂಘ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸತತ 9 ವರ್ಷಗಳಿಂದ ಸಾಧನಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂಘಕ್ಕೆ ಲಭಿಸಿದೆ. ‘ಒಟ್ಟು 17 ಶಾಖೆಗಳಲ್ಲಿ 109 ಸಿಬ್ಬಂದಿಗಳು, 62 ಮಂದಿ ನಿತ್ಯನಿಧಿ ಸಂಗ್ರಾಹಕರು ಸೇವೆ ಸಲ್ಲಿಸುತ್ತಿದ್ದಾರೆ. 5.28 ಕೋಟಿ ವೆಚ್ಚದಲ್ಲಿ ಸಂಘವು ಸ್ವಂತ ಕೇಂದ್ರ ಕಚೇರಿಯನ್ನು ಹೊಂದಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು, ಹಳೆಯಂಗಡಿ, ಬೆಳುವಾಯಿ, ಕಬಕ ಹಾಗೂ ಮೂಡಬಿದಿರೆ, ಬಜಗೋಳಿ ಶಾಖೆ ಸ್ವಂತ ಮಾಲೀಕತ್ವಕ್ಕೆ ಖರೀದಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಗುರುಪುರ – ಕೈಕಂಬ, ಬೆಳ್ಳಾರೆ ಮತ್ತು ಕುತ್ತಾರ್ ಪದವು ಇಲ್ಲಿ ಹೊಸ ಶಾಖೆಗಳು ಪ್ರಾರಂಭವಾಗಲಿದೆ’ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಜಗದೀಶ್ಚಂದ್ರ ಡಿ.ಕೆ, ನಿರ್ದೇಶಕರುಗಳಾದ ಸಂಜೀವ ಪೂಜಾರಿ, ಚಂದ್ರಶೇಖರ್, ಗಂಗಾಧರ ಮಿತ್ತಮಾರ್, ಧರಣೇಂದ್ರ ಕುಮಾರ್, ಚಿದಾನಂದ ಪೂಜಾರಿ ಎಲ್ದಕ್ಕ, ಮುಖ್ಯಾಧಿಕಾರಿ ಮೋನಪ್ಪ ಪೂಜಾರಿ ಹಾಗೂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಅಶ್ವಥ್ ಕುಮಾರ್ ಉಪಸ್ಥಿತರಿದ್ದರು.