ಅಪ್ರಾಪ್ತ ಬಾಲಕನ ಮೇಲೆ ನೈತಿಕ ಪೊಲೀಸ್ ಗಿರಿ ಆರೋಪ, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು:

 

 

 

ಬೆಳ್ತಂಗಡಿ: ಶಾಲಾ ಸ್ನೇಹಿತರೊಂದಿಗೆ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ವಯಸ್ಸಿನ ಬಾಲಕನ ಮೇಲೆ ನೈತಿಕ ಪೊಲೀಸ್ ಗಿರಿಯ ಘಟನೆ ನಡೆದಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ 17 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪದಡಿ ಪ್ರಕರಣ ದಾಖಲಾಗಿದೆ. ಈ ಘಟನೆ ಮಾರ್ಚ್ 11 ರಂದು ನಡೆದಿದ್ದು, ತಡವಾಗಿ ದೂರು ದಾಖಲಾಗಿದೆ.

ಈ ಬಾಲಕನು ಮಾರ್ಚ್ 11 ರಂದು ಸಂಜೆ, ತನ್ನ ಶಾಲಾ ಸ್ನೇಹಿತರೊಂದಿಗೆ ಜಾತ್ರೆಗೆ ತೆರಳಿದ್ದನು. ಈ ವೇಳೆ ಜಾತ್ರಾ ಸ್ಥಳದಲ್ಲಿದ್ದ ಕೆಲವರು, ತಮ್ಮ ಧರ್ಮದ ಹುಡುಗಿಯರೊಂದಿಗೆ ಅನ್ಯ ಧರ್ಮದ ಬಾಲಕ ಜಾತ್ರೆಗೆ ಬಂದಿರುವುದಾಗಿ ಆಕ್ಷೇಪಿಸಿ, ಬಾಲಕನೆ ಮೇಲೆ ಹಲ್ಲೆ ನಡೆಸಿ ನಿಂದಿಸಿದ್ದಾರೆ. ಅಷ್ಟು ಮಾತ್ರವಲ್ಲದೆ, ಈ ಬಾಲಕನನ್ನು ಅಲ್ಲಿಂದ ಬೈಕಿನಲ್ಲಿ ದೂರ ಕರೆತಂದು ಹಲ್ಲೆ ಮಾಡಿ, ಬಾಲಕನಿಂದ ತಾನೇ ಜಾತ್ರಾ ಸ್ಥಳದಲ್ಲಿ ತಪ್ಪು ಮಾಡಿರುವುದಾಗಿ ವಿಡಿಯೋ ಹೇಳಿಕೆ ದಾಖಲಿಸಿಕೊಂಡು ಆತನನ್ನು ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಘಟನೆಯಿಂದ ಬಾಲಕ ಕೆಲ ದಿನಗಳಿಂದ ಭಯಭೀತನಾಗಿದ್ದು, ಈ ಬಗ್ಗೆ ವಿಚಾರಿಸಿದಾಗ ಹಲ್ಲೆ ನಡೆದಿರುವುದು ತಿಳಿದುಬಂದಿದೆ. ಆ ಬಳಿಕ ಬಾಲಕನ ತಂದೆ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಬೆಳ್ತಂಗಡಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕ‌ನ್ನಡ ಜಿಲ್ಲಾ ಎಸ್​ಪಿ ಡಾ. ಅರುಣ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಲ್ಲೆ, ಕೊಲೆ ಬೆದರಿಕೆ, ಗುಂಪು ಹಲ್ಲೆ, ಜೀವಬೆದರಿಕೆ, ಅಪಹರಣ, ಆತ್ಮಹತ್ಯೆಗೆ ಪ್ರೇರಣೆಯ ಬಗ್ಗೆ ನೀಡಿರುವ ದೂರಿನಂತೆ ಆರೋಪಿಗಳಾದ ಗೌರವ್ ಶೆಟ್ಟಿ, ರಮೇಶ್ ಹಾಗೂ ಇತರರ ವಿರುದ್ಧ ಪೊಲೀಸರು BNS 137(2), 115(2), 351 (2), 352, 353(2) ಜೊತೆಗೆ 190 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

error: Content is protected !!