
ಬೆಳ್ತಂಗಡಿ : ‘ವಸ್ತುನಿಷ್ಠೆಯನ್ನು ನಿರಂತರವಾಗಿ ಕಾಪಾಡಿಕೊಂಡರೆ ಮಾತ್ರ ಸಮಾಜ ಪತ್ರಕರ್ತರನ್ನು ಗುರುತಿಸುತ್ತದೆ’ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಅವರು
ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಬೆಳ್ತಂಗಡಿ ಲಯನ್ಸ್ ಭವನದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
‘ಸತ್ಯದ ವರದಿಗೆ ಜನರು ಸ್ಪಂದಿಸುತ್ತಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಯೂ ಸಮಾಜಕ್ಕೆ ಸ್ಪಂದಿಸಿದರೆ ಮಾತ್ರ ಪರಿವರ್ತನೆ ಸಾಧ್ಯ’ ಎಂದು ಅವರು ಹೇಳಿದರು.
ಪತ್ರಕರ್ತರ ಸಮಸ್ಯೆ ಮತ್ತು ಬವಣೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದ ಅವರು, ತಾಲ್ಲೂಕು ಸಂಘದ ಕಟ್ಟಡದ ಜಾಗ ಖರೀದಿಗೆ ವೈಯಕ್ತಿಕವಾಗಿ ₹2 ಲಕ್ಷ ಹಾಗೂ ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ₹20 ಲಕ್ಷ ನೀಡುತ್ತೇನೆ. ಅಲ್ಲದೆ ವಿವಿಧ ಸಿ.ಎಸ್.ಆರ್. ನಿಧಿಗಳನ್ನು ಒದಗಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.
ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಅವರು, ‘ಸಂಘದ ಜಾಗಕ್ಕೆ ₹1 ಲಕ್ಷ ಹಾಗೂ ಪೀಠೋಪಕರಣಗಳ ಖರೀದಿಗೆ ₹1 ಲಕ್ಷ ನೀಡುತ್ತೇನೆ’ ಎಂದು ಆಶ್ವಾಸನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪುಷ್ಪರಾಜ್ ಬಿ.ಎನ್. ಮಾತನಾಡಿ, ‘ಪತ್ರಕರ್ತರ ಕೆಲಸ ಸಮಾಜಮುಖಿಯಾದುದು. ಹೀಗಾಗಿ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು. ಪತ್ರಕರ್ತರು ಮತ್ತು ಅವರ ಕುಟುಂಬಗಳಿಗೆ ಸಂಪೂರ್ಣ ಆರೋಗ್ಯ ತಪಾಸಣೆಯನ್ನು ಜಿಲ್ಲೆಯಲ್ಲಿ ನಿರಂತರವಾಗಿ ನಡೆಸಲಾಗುತ್ತಿದೆ’ ಎಂದರು.
ದಾಂಡೇಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ್ ಜೈನ್ ಉಪನ್ಯಾಸ ನೀಡಿದರು. ಮಂಜುವಾಣಿ ಮಾಸಪತ್ರಿಕೆಯ ಸಂಪಾದಕ ಭಾಸ್ಕರ್ ಹೆಗಡೆ ಅವರನ್ನು ಹಾಗೂ ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ಇಂದಾಜೆ, ಜಿಲ್ಲಾ ಸಮಿತಿ ಸದಸ್ಯ ಭುವನೇಶ್ವರ ಜಿ., ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಇದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕಾರಾಮ್ ಬಿ. ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲ್ಲೂಕಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವೇಣೂರು ಪ್ರೌಢಶಾಲೆಯ ಸಮೃದ್ಧಿ ಜೈನ್, ಗುರುವಾಯನಕೆರೆ ಪ್ರೌಢ ಶಾಲೆಯ ಮೊಹಮ್ಮದ್ ಶಹಜಾದ್ ಹಾಗೂ ಸವಣಾಲು ಪ್ರೌಢಶಾಲೆಯ ಅಪೇಕ್ಷಾ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಉಜಿರೆ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡ ಸುನಿಲ್ ಹೆಗ್ಡೆ ಅವರನ್ನು ಗೌರವಿಸಲಾಯಿತು.
ಪತ್ರಕರ್ತ ಮನೋಹರ ಬಳಂಜ ಹಾಗೂ ಲಿಖಿತ ದಂಪತಿಯ ವತಿಯಿಂದ ನಾಲ್ಕು ಅಸಹಾಯಕ ಕುಟುಂಬಗಳಿಗೆ ‘ದಿತಿ ಸಾಂತ್ವನ ನಿಧಿ’ಯನ್ನು ಶಾಸಕರು ಹಸ್ತಾಂತರಿಸಿದರು.
ಪ್ರಧಾನ ಕಾರ್ಯದರ್ಶಿ ಮನೋಹರ ಬಳಂಜ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್, ಸದಸ್ಯರಾದ ಬಿ.ಎಸ್.ಕುಲಾಲ್ ಹಾಗೂ ಆಚು ಶ್ರೀ ಬಾಂಗೇರು ಪರಿಚಯಿಸಿದರು. ಕಾರ್ಯದರ್ಶಿ ಶಿಬಿ ಧರ್ಮಸ್ಥಳ ವಂದನಾರ್ಪಣೆ ಮಾಡಿದರು. ಸದಸ್ಯ ಅಶ್ರಫ್ ಆಲಿಕುಂಞ ಕಾರ್ಯಕ್ರಮ ನಿರೂಪಿಸಿದರು.