
ಬೆಳ್ತಂಗಡಿ: ತೆಂಗು, ಅಡಿಕೆ, ಭತ್ತ ಮೊದಲಾದವುಗಳ ಕೃಷಿಯಲ್ಲಿ ಬೆಳೆಗಿಂತಲೂ ಅವುಗಳ ಸಿಪ್ಪೆ, ಗೆರಟೆ, ಹಾಳೆ ಮೊದಲಾದ ತ್ಯಾಜ್ಯಗಳಿಗೆ ಬೆಲೆ ಹಾಗೂ ಬೇಡಿಕೆ ಈಗ ಹೆಚ್ಚಾಗಿದೆ. ಅಡಿಕೆ ಮರದ ಹಾಳೆ ತಟ್ಟೆಯಲ್ಲಿ ಇಂದು ಶ್ರೀಮಂತರು ಹಾಗೂ ಪ್ರತಿಷ್ಠಿತ ಜನರು ಊಟ ಮಾಡುತ್ತಾರೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿ ಆದಾಗ ನಗರಗಳಿಂದ ಜನರು ಮತ್ತೆ ಹಳ್ಳಿಗಳ ಕಡೆಗೆ ಪುನರ್ ವಲಸೆ ಬರುತ್ತಾರೆ ಎಂದು ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಹೇಳಿದರು.

ಅವರು ಶನಿವಾರ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ಅಗ್ರಿಲೀಫ್ ಸಂಸ್ಥೆಯ ಆಶ್ರಯದಲ್ಲಿ ಹೋಟೆಲ್ ಆದಿತ್ಯ ವ್ಯೂ ನ ಪಂಚವಟಿ ಸಭಾಭವನದಲ್ಲಿ “ರೈತರ ಜೊತೆ ವಿಶ್ವದ ಕಡೆ” ತತ್ವದಲ್ಲಿ ಆಯೋಜಿಸಿದ “ರೈತ-ಸಂಸ್ಥೆ ಸಮನ್ವಯ ಸಭೆ”ಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿಶೇಷ ಉಪನ್ಯಾಸ ನೀಡಿದರು.
ಹಿಂದಿನ ಕಾಲದಲ್ಲಿ ಅಡಿಕೆ ಹಾಳೆಯಿಂದ ತಯಾರಿಸಿ “ಚಿಲ್ಲಿ” ಯಲ್ಲಿ ಊಟ ಮಾಡುವುದು ಸಂಪ್ರದಾಯವಾಗಿತ್ತು. ಅಡಿಕೆ ಹಾಳೆತಟ್ಟೆಯಿಂದ ಮೊಬೈಲ್ ಕವಚ, ಸೂಟ್‌ಕೇಸ್, ಪಾದರಕ್ಷೆ, ಆಕರ್ಷಕ ಕಲಾಕೃತಿಗಳನ್ನು ತಯಾರಿಸಬಹುದು ಎಂದು ಕಂಡು ಹಿಡಿದಿದ್ದಾರೆ.

ಅಧಿಕ ಕೀಟನಾಶಕಗಳ ಬಳಕೆ, ಔಷಧಿಗಳ ಸಿಂಪಡಣೆಯಿಂದ ಮಣ್ಣಿನ ಆರೋಗ್ಯ ಹಾಳಾಗಿದ್ದು ಸಾರವೂ ಕಡಿಮೆ ಆಗಿದೆ. ಸ್ಥಳೀಯವಾಗಿ ಲಭ್ಯ ಇರುವ ಸಂಪನ್ಮೂಲಗಳು ಹಾಗೂ ಕಚ್ಛಾ ವಸ್ತುಗಳನ್ನು ಬಳಸಿ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮಗಳನ್ನು ಆರಂಭಿಸಿದಾಗ ಊರಿನ ಅಭಿವೃದ್ಧಿ ಜೊತೆಗೆ ಸ್ಥಳೀಯರಿಗೆ ಉದ್ಯೋಗವೂ ದೊರಕುತ್ತದೆ. ನಗರಗಳಿಗೆ ಜನರು ವಲಸೆ ಹೋಗುವುದು ತಪ್ಪುತ್ತದೆ ಎಂದು ಅವರು ಹೇಳಿದರು.
ಇಂದು ಕರ್ನಾಟಕ ಅತಿ ಹೆಚ್ಚು ಬರಪಪೀಡಿತ ಪ್ರದೇಶವಾಗಿದ್ದು ಬಿಲ್ವ ಮತ್ತು ಬೇಲ ಎಲೆಗಳ ಕೃಷಿ ನೀರಿನ ಸಂಪನ್ಮೂಲ ರಕ್ಷಣೆಗೆ ವರದಾನವಾಗಿದೆ ಎಂದರು.
ಅಗ್ರಿಲೀಫ್ ಸಂಸ್ಥೆಯ ಮೂಲಕ ಅಡಿಕೆ ಹಾಳೆತಟ್ಟೆ ತಯಾರಿ ಉದ್ಯಮ ಪ್ರಾರಂಭಿಸಿ ಯಶಸ್ವಿಯಾದ ಅವಿನಾಶ್ ರಾವ್ ಮತ್ತು ಅತಿಶಯ ಜೈನ್ ಅವರ ಸೇವೆ-ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು.
ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ, ಅನಂತ ಭಟ್ ಮಚ್ಚಿಮಲೆ ಮತ್ತು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಎಸ್.ಚಂದ್ರಶೇಖರ್ ಶುಭಾಶಂಸನೆ ಮಾಡಿದರು.
ಹಾಳೆತಟ್ಟೆ ಸಂಗ್ರಹದಲ್ಲಿ ವಿಶೇಷ ಸಾಧನೆ ಮಾಡಿದ ಲೋಕಯ್ಯ ಗೌಡ, ಕೊಯ್ಯೂರು, ಬಾಬು ಸುಳ್ಯೋಡಿ. ಪ್ರೇಮ ಕರಾಯ, ನಂದಿನಿ ಕುದ್ರಡ್ಕ, ನಿರಂಜನ ಗೌಡ ಬಂದಾರು ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ನಂದಿನಿ ಮತ್ತು ನಿರಂಜನ ಗೌಡ ಬಂದಾರು ತಮ್ಮ ಅನಿಸಿಕೆ, ಅನುಭವ ಹಂಚಿಕೊಂಡರು.
ಅವಿನಾಶ್ ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅತಿಶಯ ಜೈನ್ ಧನ್ಯವಾದವಿತ್ತರು. ಪೃಥ್ವಿ ಕಾರಿಂಜೆ ಕಾರ್ಯಕ್ರಮ ನಿರ್ವಹಿಸಿದರು.
ಇದನ್ನೂ ಓದಿ: