
ಬೆಂಗಳೂರು: ಬೆಳ್ತಂಗಡಿ ತಾಲೂಕಿನ ನಡ ಗ್ರಾಮ ವ್ಯಾಪ್ತಿಯ ಮಲೆಯಡ್ಕ ಸಮೀಪದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಜನವಸತಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾದ ಮುಗ್ರೋಡಿ ಕನ್ ಸ್ಟ್ರಕ್ಷನ್ ಹಾಟ್ ಮಿಕ್ಸ್ ಘಟಕಕ್ಕೆ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ನೋಟೀಸ್ ಜಾರಿ ಮಾಡಿದೆ.
2008 ರಿಂದ ನಾಡ್ಜೆ ಅರಣ್ಯ ವ್ಯಾಪ್ತಿಗೆ ಸಮೀಪವಿರುವ ಉಜಿರೆ- ಪಡ್ವೆಟ್ಟು-ಸುರ್ಯ ರಸ್ತೆಯಲ್ಲಿ ಮುಗ್ರೋಡಿ ಕನ್ ಸ್ಟ್ರಕ್ಷನ್ ಮಿಕ್ಸಿಂಗ್ ಘಟಕ ಕಾರ್ಯನಿರ್ವಹಿಸುತ್ತಿದ್ದು. ಕಲುಷಿತ ನೀರು, ಹೊಗೆ, ತ್ಯಾಜ್ಯದ ಅಸಮರ್ಪಕ ನಿರ್ವಹಣೆ , ಗ್ರಾಮೀಣ ರಸ್ತೆಯಲ್ಲಿ ಎಗ್ಗಿಲ್ಲದೆ ಸಾಗುವ ಭಾರೀ ಟ್ರಕ್ ಜನಸಾಮಾನ್ಯರು, ನಿತ್ಯಪ್ರಯಾಣಿಕರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿದೆ ಎಂದು ಮಲೆಯಡ್ಕ, ಇಚ್ಚಾವು, ಕೋಡಿಜಾಲು ನಿವಾಸಿಗಳು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸಂಜೆಯಿಂದ ಹಬ್ಬುವ ಕಮಟು ವಾಸನೆಯಿಂದ ಜನ ಉಸಿರಾಟದಂತಹ ಗಂಭೀರ ಸಮಸ್ಯೆಗೆ ಒಳಗಾಗಿ. ಮಕ್ಕಳು ವೃದ್ದರಲ್ಲಿ ಅಸ್ತಮಾ, ಹೃದೋಗ ಸಮಸ್ಯೆಗಳು ತಲೆದೋರಿವೆ ಎಂದು ಆರೋಪಿಸಿರುವ ನಾಗರಿಕರು. ವೈದ್ಯಕೀಯ ವರದಿಗಳು , ನೀರಿನ ಸ್ಯಾಂಪಲ್ ಗಳ ಮೂಲಕ ಇದೀಗ ಹೈಕೋರ್ಟ್ ಕದ ತಟ್ಟಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಗ್ರಾಮ ಪಂಚಾಯತ್ ನಡ, ತಹಶೀಲ್ದಾರರ ಕಛೇರಿಗೆ ಇಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದರಾದರೂ ಅದು ಏನೂ ಪ್ರಯೋಜನವಾಗಿರಲಿಲ್ಲ ಎನ್ನಲಾಗಿದೆ. ಜನಪ್ರತಿನಿಧಿಗಳು, ಪೋಲೀಸ್ ಇಲಾಖೆಗೆ ಸಲ್ಲಿಸಿದ ಮನವಿಗೂ ಸ್ಪಂದನೆ ಸಿಗದೆ ಇದೀಗ ಪ್ರಕರಣ ಮಾನ್ಯ ಉಚ್ಚನ್ಯಾಯಾಲಯ ತಲುಪಿದೆ.
ಹೆಚ್ಚಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ನೆಲೆಸಿರುವ ಸಾಮಾನ್ಯ ಕೂಲಿ ಕಾರ್ಮಿಕರಿರುವ ಈ ಜನವಸತಿ ಪ್ರದೇಶದಲ್ಲಿ ಭಾರೀ ಪ್ರಮಾಣದ ಕೈಗಾರಿಕೆ ಪ್ರಶ್ನಿಸಿ ಇಲ್ಲಿನ ನಿವಾಸಿಗಳು ಕರ್ನಾಟಕದ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು. ಸಾಮಾಜಿಕ ಕಳಕಳಿಯ ಅರ್ಜಿ ಕೈಗೆತ್ತಿಕೊಂಡ ನ್ಯಾಯಾಲಯ ಮುಗ್ರೋಡಿ ಹಾಟ್ ಮಿಕ್ಸ್ ಘಟಕ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಬೆಳ್ತಂಗಡಿ ತಹಶೀಲ್ದಾರ್ , ಜಿಲ್ಲಾಧಿಕಾರಿ ದ.ಕ, ಮಾಲಿನ್ಯ ನಿಯಂತ್ರಣ ಮಂಡಳಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಡ ಇವರಿಗೂ ನೋಟೀಸ್ ನೀಡಿದೆ.
ಮರಾಟಿ ನಾಯ್ಕ ಸಮುದಾಯದ ಪ್ರಮುಖರಾದ ತಿಮ್ಮಯ್ಯ ನಾಯ್ಕ ಮಲೆಯಡ್ಕ, ನಾರಾಯಣ ನಾಯ್ಕ ಮಲೆಯಡ್ಕ, ದಯಾನಂದ ನಾಯ್ಕ ಇಚ್ಚಾವು, ಮುನೀಶ್ ಇಚ್ಚಾವು ಈ ಅನ್ಯಾಯ ಪ್ರಶ್ನಿಸಿ ಮಾನ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಶೋಷಿತರ ಧ್ವನಿಯಾಗಿ ಕೆಲಸ ಮಾಡುವ ಹೋರಾಟಗಾರ ಹಾಗೂ ಖ್ಯಾತ ಅಡ್ವೊಕೇಟ್ ಸೋಮಶೇಖರ್ ರಾಜವಂಶಿ ಅರ್ಜಿದಾರರ ಪರವಾಗಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ವಾದ ಮಂಡಿಸಿದರು
ಭೂ ಒತ್ತುವರಿ, ರಾತ್ರಿಹಗಲು ನಿರಂತರ ಕಾರ್ಯನಿರ್ವಹಣೆ, ಶಬ್ದಮಾಲಿನ್ಯ, ಪ್ರಾಕೃತಿಕ ಅಸಮತೋಲನ, ಜಲಚರಗಳಿಗೆ ಹಾನಿ, ಜಲಮಾಲಿನ್ಯ, ಅಸಮರ್ಪಕ ದಾಖಲಾತಿಗಳು ಪರಿಶಿಷ್ಟರ ಹಕ್ಕುಗಳಿಗೆ ಧಕ್ಕೆಯ ಹಿನ್ನಲೆಯಲ್ಲಿ ದೂರು ನೀಡಲಾಗಿದೆ.