
ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಡಿ. 26 ರಂದು ಭಾರತ್ ಮಾತಾ ಸಭಾಭವನದಲ್ಲಿ ನಡೆಯಿತು.
94/ಸಿಸಿ ಕಡತಗಳು ಕಳೆದ ನಾಲ್ಕು ವರ್ಷಗಳಿಂದ ಇತ್ಯರ್ಥಗೊಳ್ಳದೇ ಬಾಕಿ ಉಳಿದಿದೆ ಆದರೆ ಸರ್ವೇ ನಂಬರ್ 158ರಲ್ಲಿ ಅಕ್ರಮ-ಸಕ್ರಮ, 94/ಸಿ ಆಗಿದೆ ಆವಾಗ ಅರಣ್ಯ ತೊಡಕು ಬರಲಿಲ್ಲವೇ ಎಂದು ಗ್ರಾಮಸ್ಥರು ಹೇಳಿದಾಗ ಜಂಟಿ ಸರ್ವೇ ಮೂಲಕ ಪರಿಹಾರ ಒದಗಿಸುವ ಕೆಲಸವಾಗಬೇಕಿದೆ. ಮಂಜೂರಾತಿಯಾದ ಜಾಗಗಳು ರದ್ದತಿಗೆ ಒಳಪಡುತ್ತಿದೆ ಎಂದು ಇಲಾಖಾಧಿಕಾರಿಗಳು ತಿಳಿಸಿದರು.
ಅರಣ್ಯ ಇಲಾಖೆಯ ಜಾಗದಲ್ಲಿ ಈ ಹಿಂದೆ
ಮಂಜೂರಾತಿಯಾದ ಭೂಮಿ ವಾರಿಸುದಾರರಿಗೆ ಇಲಾಖೆ ಜಾಗದ ರದ್ಧತಿಯ ನೋಟಿಸ್ ಜಾರಿ ಮಾಡಿದೆ. ಇದು ಅಂದು ಮಂಜೂರಾತಿಗೊಳಿಸಲು ಸಹಕರಿಸಿದ ಬ್ರೋಕರ್ ಗಳ ಹಾಗೂ ಅಧಿಕಾರಿಗಳ ಹಾವಳಿಯಿಂದ ಜನಸಾಮಾನ್ಯರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಿದರೆ ಇಂತಹ ಸಮಸ್ಯೆ ಅನೇಕ ಕಡೆಗಳಲ್ಲಿ ಬಗೆಹರಿಯಲಿದೆ, ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ, ಎಪ್ರಿಲ್ ಬಳಿಕ 158 ಸರ್ವೇ ನಂಬರ್ ನಲ್ಲಿ ಜಂಟಿ ಸರ್ವೇ ನಡೆಸಲು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಲಾಯಿಲ ಗ್ರಾಮ ವ್ಯಾಪ್ತಿಯಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಾಲಯ ಯಾವುವು, ಪುಲಿತ್ತಡ್ಕ ಹಾಗೂ ಪುತ್ರಬೈಲು ಗುರಿಗಾಂನ ರಸ್ತೆ ದುರಸ್ತಿಗೆ ಆಗ್ರಹ, ಹೆದ್ದಾರಿಯ ಸರ್ವೀಸ್ ರಸ್ತೆ ಕಾಶಿಬೆಟ್ಟು ಇಂಡಸ್ಟ್ರೀಸ್ ಗೆ ಸಮರ್ಪಕವಾಗಿ ನಿರ್ಮಿಸುವ ಕುರಿತು ಗ್ರಾಮಸ್ಥರು ಮನವಿ ಸಲ್ಲಿಸಿದರು. ರಾಷ್ಟ್ರೀಯ ಹೆದ್ದಾರಿ, ಗುತ್ತಿಗೆದಾರರು, ಕೆಎಸ್ ಡಿಸಿ, ಪಂಚಾಯತ್ ನೊಂದಿಗೆ ಸಭೆ ನಡೆಸಲಾಗುವುದು ಎಂದು ಶಾಸಕರು ಪ್ರತಿಕ್ರಿಯಿಸಿದರು.
ತೆರಿಗೆ ಕಟ್ಟಡವರಿಗೆ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಅಧಿಕಾರಿಗಳು ನೀಡುತ್ತಿದ್ದಾರೆ. ಪಾದಚಾರಿಗಳಿಗೆ ರಸ್ತೆ ಬದಿ ನಡೆದುಕೊಂಡು ಹೋಗಲು ಜಾಗವಿಲ್ಲ, ಅಕ್ರಮವಾಗಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡುತ್ತಾರೆ, ವಿದ್ಯುತ್ ಸಂಪರ್ಕಕ್ಕೆ ಯಾವುದೇ ದಾಖಲೆಗಳಿಲ್ಲದೇ ಅಕ್ರಮವಾಗಿ ಸಂಪರ್ಕ ಕಲ್ಪಿಸುತ್ತಾರೆ ಬಡವರಿಗೆ ಒಂದು ಕಾನೂನು ಶ್ರೀಮಂತರಿಗೆ ಒಂದು ಕಾನೂನು ಪಂಚಾಯತ್ ನಲ್ಲಿ ಇದೆ. ಆಡಳಿತ ಮಂಡಳಿ ಉತ್ತಮ ಸ್ಪಂದನೆಯಿದೆ ಆದರೆ ಅಧಿಕಾರಿಗಳಿಂದ ಇಲ್ಲ. ಗ್ರಾಮ ಪಂಚಾಯತ್ ನ ನೂರು ಮೀಟರ್ ಹಂತದಲ್ಲಿ ಕೊಳವೆ ಬಾವಿ ಕೊರೆಸುತ್ತಾರೆ ಆದರೆ ಕ್ರಮ ವಹಿಸುವುದಿಲ್ಲ ಎಂದು ಗ್ರಾಮಸ್ಥರು ಹೇಳಿದರು.
ಹಲವು ಗ್ರಾಮಗಳಲ್ಲಿರುವ ಅನಧಿಕೃತ ಕಟ್ಟಡಗಳ ನಿರ್ಮಾಣವನ್ನು ನಿಲ್ಲುಸಲು ಆಗುವುದಿಲ್ಲ ಎಂದಾದರೆ ಕಾನೂನಿನ ಪರಿಧಿಯಲ್ಲಿ ತಹಶೀಲ್ದಾರ್ ಇಓ ಕಾರ್ಯನಿರ್ವಹಿಸುದಿಲ್ಲ, ಅಧಿಕಾರಿಗಳು ಮುತುವರ್ಜಿ ವಹಿಸುವುದಿಲ್ಲ, ಅರಣ್ಯ ಇಲಾಖೆ ತಮ್ಮ ಜಾಗವನ್ನು ಒತ್ತುವರಿ ನಡೆಸಿದರೆ ತೆರವು ಗೊಳಿಸುತ್ತಾರೆ ಯಾಕೆ ನಿಮಗೆ ಆಗುವುದಿಲ್ಲ. ಅಧಿಕಾರಿಗಳು ಪಕ್ಷ ರಹಿತವಾಗಿ ಕರ್ತವ್ಯ ನಿರ್ವಹಿಸಬೇಕು. ಅನಧಿಕೃತ ಕಟ್ಟಡಗಳನ್ನು ಯಾರು ನಿಲ್ಲಿಸುವುದಿಲ್ಲ ಎಂದಾದರೆ ನಾನು ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಪ್ರಶ್ನಿಸುತ್ತೇನೆ ಅವರು ಉತ್ತರಿಸಲಿ. ಪಂಚಾಯತ್ ನಿಂದ ಎನ್ ಓಸಿ ನೀಡದೆ ಕೊರೆಸಿದ ಕೊಳವೆಬಾವಿಯನ್ನು ಪಂಚಾಯತ್ ವಶಪಡಿಸಬೇಕು ಮತ್ತು ಅನಧಿಕೃತ ಕಟ್ಟಡ ಕುರಿತು ಹೈ ಕೋರ್ಟ್ ಹೋಗಿ ಎಂದು ಶಾಸಕರು ತಿಳಿಸಿದರು.
ಕಾಶಿಬೆಟ್ಟು ಪರಿಸರದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಆಗಿದೆ ಎಂದು ಗ್ರಾಮಸ್ಥರು ಹೇಳಿದಾಗ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನನಗೆ ಈ ಬಗ್ಗೆ ತಿಳಿದಿಲ್ಲ ಎಂದು ಪಿಡಿಒ ತಿಳಿಸಿದರು. ಪಿಡಿಒಗೆ ತಿಳಿದರೂ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಗ್ರಾಮಸ್ಥರು ಹೇಳಿದರು.
ನಿರ್ಮಾಣ ಹಂತದಲ್ಲಿರುವ ಕಟ್ಟಡದ ಕುರಿತು ಯೋಜನಾ ಪ್ರಾಧಿಕಾರಕ್ಕೆ ಪತ್ರ ಬರೆಯಬೇಕು ಎಂದು ಪಿಡಿಒಗೆ ಖಡಕ್ ಶಾಸಕರು ಸೂಚನೆ ನೀಡಿದರು. 48 ಪಂಚಾಯತ್ ನಲ್ಲಿ 23 ಪಿಡಿಓಗಳಿದ್ದಾರೆ, ಗ್ರೇಡ್ 1 ಕಾರ್ಯದರ್ಶಿಗಳು 9 ಮಂದಿಯಿದ್ದಾರೆ ಆದರೆ ಲಾಯಿಲ ಗ್ರಾಮ ಪಂಚಾಯತ್ ಗೆ ಗ್ರೇಡ್ 1 ಕಾರ್ಯದರ್ಶಿ ತಾರಾನಾಥ್ ಅವರನ್ನು ಪ್ರಭಾರ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿ ನಿಯೋಜಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಕುಡಿಯುವ ನೀರು ನಮಗೆ ಇಲ್ಲ ಎಂದು ಗ್ರಾಮಸ್ಥೆಯೊಬ್ಬರು ಹೇಳಿದಾಗ ಜೆಜೆಎಂ ಯೋಜನೆಯೊಳಗೆ 15 ದಿನದಲ್ಲಿ ಸಂಪರ್ಕ ಕಲ್ಪಿಸುವುದಾಗಿ ಎಂದು ಶಾಸಕರು ತಿಳಿಸಿದರು. ಜೆಜೆಎಂ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಗ್ರಾಮಸ್ಥರು ಹೇಳಿದರು. ಕಾಮಗಾರಿ ಸಮರ್ಪಕವಾಗಿ ನಡೆಸದಿದ್ದಲ್ಲಿ ಗ್ರಾಮ ಪಂಚಾಯತ್ ಹಸ್ತಾಂತರ ತೆಗೆದುಕೊಳ್ಳಬಾರದು ಎಂದು ಶಾಸಕರು ತಿಳಿಸಿದರು.
ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಹಾಗೂ ಪಂಚಾಯತ್ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಶಾಸಕರು ಪ್ರಯತ್ನಿಸಬೇಕು ಎಂದು ಗ್ರಾಮಸ್ಥರು ಶಾಸಕರಲ್ಲಿ ವಿನಂತಿಸಿದರು. ನ್ಯಾಯಬೆಲೆ ಅಂಗಡಿಯನ್ನು ಪಂಚಾಯತ್ ಕಟ್ಟಡಕ್ಕೆ ವರ್ಗಾಯಿಸಬೇಕು ಎಂದು ಗ್ರಾಮಸ್ಥರು ಹೇಳಿದಾಗ ನ್ಯಾಯ ಬೆಲೆ ಅಂಗಡಿಯನ್ನು ವರ್ಗಾಯಿಸುವಾಗ ಟಿಎಂಪಿಎಸ್ ಆಡಳಿತ ಮಂಡಳಿಗೆ ಜನಸ್ಪಂದನ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ ಎಂದು ಅವರಿಗೆ ಸೂಚನೆ ನೀಡಬೇಕು ಎಂದು ಶಾಸಕರು ತಿಳಿಸಿದರು. ಇಂಡಿಯನ್ ಅಡುಗೆ ಅನಿಲವನ್ನು ಹೊರ ಗ್ರಾಮದವರು ಹೋಲ್ ಸೇಲ್ ಆಗಿ ಖರೀದಿಸಿ ಕೊಂಡು ಹೋಗುತ್ತಿದ್ದಾರೆ ಇದರಿಂದ ಲಾಯಿಲ ಗ್ರಾಮದರಿಗೆ ಸಿಲಿಂಡರ್ ಸಿಗುತ್ತಿಲ್ಲ, ಕಲ್ಕಣಿ ನ್ಯಾಯ ಬೆಲೆ ಅಂಗಡಿಯಲ್ಲಿ ಡಿಜಿಟಲ್ ತೂಕ ಮಾಪನ ಇಲ್ಲ
ಎಂದು ಗ್ರಾಮಸ್ಥರು ಹೇಳಿದರು. ಈ ಬಗ್ಗೆ ಆಹಾರ ಇಲಾಖೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ.ಕೆ., ತಹಶೀಲ್ದಾರ್ ಪೃಥ್ವಿ ಸಾನಿಕಂ, ತಾಲೂಕು ಪಂಚಾಯತ್ ಇಓ ಭವಾನಿ ಶಂಕರ್, ಸದಸ್ಯರು, ಇಲಾಖಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.