
ಬೆಳ್ತಂಗಡಿ: ರಸ್ತೆ ದುರಸ್ತಿಯಾಗದೇ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ದಯವಿಟ್ಟು ದುರಸ್ತಿಗೊಳಿಸಿ ಎಂದು ಶಾಸಕರಲ್ಲಿ ಗ್ರಾಮಸ್ಥರು ಮನವಿ ಮಾಡಿದ ಘಟನೆ ನಡ ಜನಸ್ಪಂದನ ಸಭೆಯಲ್ಲಿ ನಡೆಯಿತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಗ್ರಾಮ ಮಟ್ಟದ ಜನಸ್ಪಂದನ ಸಭೆಯು ನಡ ಗ್ರಾಮ ಪಂಚಾಯತ್ ವಠಾರದಲ್ಲಿ ಡಿ 08 ರಂದು ನಡೆಯಿತು.ರಸ್ತೆಗಳೆಲ್ಲ ಹಾಳಾಗಿ ಸಂಚಾರ ಮಾಡಲು ಸಾಧ್ಯ ಇಲ್ಲವಾಗಿದೆ.ಚಂದ್ಕೂರು ರಸ್ರೆ ಸಂಪೂರ್ಣ ಕಿತ್ತು ಹೋಗಿ ಬೈಕ್ ಸಂಚಾರವೂ ಕಷ್ಟದಾಯಕವಾಗಿದೆ. ದಯವಿಟ್ಟು ದುರಸ್ತಿಗೆ ಕ್ರಮ ಕೈಗೊಳ್ಳಿ ಎಂದು ಸ್ಥಳೀಯರು ಶಾಸಕರಲ್ಲಿ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಶಾಸಕರು ನಿಮ್ಮ ನೋವು ನನಗೆ ಅರ್ಥವಾಗುತ್ತದೆ
ಈಗೀನ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡದಿರುವುದರಿಂದ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ.ಶಾಸಕನಾಗಿ ನನಗೂ ಮುಜುಗರವಾಗುತ್ತಿದೆ, ಅಸಾಹಾಯಕನಾಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರವಾಸಿ ತಾಣ ಗಡಾಯಿಕಲ್ಲಿಗೆ ಸಾರ್ವಜನಿಕರಿಗೆ ನಿರ್ಧಿಷ್ಟ ಸಮಯ ಹೊರತುಪಡಿಸಿ ಬೇರೆ ನಿರ್ಬಂಧ ವಿಧಿಸಲಾಗಿದೆ.ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ತರು ಆಗ್ರಹಿಸಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಅರಣ್ಯಾಧಿಕಾರಿ ವಿಪರೀತ ಬಿಸಿಲು ಕೆಲವೊಂದು ಅಪಾಯಕಾರಿ ಸ್ಥಳಗಳು ಇರುವುದರಿಂದ ಬೆಳಗ್ಗಿನ ಹೊತ್ತು ಮಾತ್ರ ಪ್ರವೇಶಕ್ಕೆ ಅವಕಾಶ ಇದೆ ಎಂದರು. ಸ್ಥಳೀಯ ಖಾಸಗಿ ಶಾಲೆಯ ಕಟ್ಟಡದ ಹಳೆಯ ಸಾಮಾಗ್ರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸುರಿಯುತ್ತಾರೆ ಎಂದಾಗ ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪಿಡಿಒ ಅವರಿಗೆ ಶಾಸಕರು ಸೂಚಿಸಿದರು.ಸ್ಥಳೀಯ ಅಂಗನವಾಡಿಗೆ ಮಂಗಗಳು ಬರುತ್ತಿರುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತದೆ, ಇದಕ್ಕೆ ಸಮರ್ಪಕ ಆವರಣಗೋಡೆ ಅವಶ್ಯಕತೆ ಇದೆ. ಎಂದಾಗ ಕ್ರಮ ಕೈಗೊಳ್ಳುವುದಾಗಿ ಶಾಸಕರು ಸೂಚಿಸಿದರು.ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮೆಷಿನ್ ಕಾಮಗಾರಿ ಅಸಮರ್ಪಕವಾಗಿದ್ದು, ಪೈಪ್ ಲೈನ್ ರಸ್ತೆಯಲ್ಲಿ ಹಾಕಿದ್ದಾರೆ ಒಂದು ವೇಳೆ ವಾಹನ ಹೋಗಿ ಹಾನಿಯಾದರೆ ಹೊಣೆ ಯಾರು ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ಜೆಜೆಎಂ ಅಧಿಕಾರಿಗಳು , ಪರಿಶೀಲಿಸಿ ಸಂಬಂಧಪಟ್ಟ ಗುತ್ತಿಗೆದಾರರಲ್ಲಿ ಸರಿಪಡಿಸಲಾಗುವುದು. ಎಂದರು.ಕೆಳ್ತಾಜೆ ಬಳಿ ಎರಡು ವರ್ಷಗಳ ಹಿಂದೆ ಸುಟ್ಟ ರೀತಿಯಲ್ಲಿ ಮೃತದೇಹ ಸಿಕ್ಕಿದ್ದು ಅಪರಾಧಿಗಳು ಇನ್ನೂ ಸಿಕ್ಕಿಲ್ಲ ಎಂದು ಗ್ರಾಮಸ್ಥರು ದೂರಿದಾಗ ಪೊಲೀಸ್ ಇಲಾಖೆಯಲ್ಲಿ ಮಾಹಿತಿ ಪಡೆದುಕೊಂಡು ಕ್ರಮಕ್ಕೆ ಪೊಲೀಸರಿಗೆ ಸೂಚಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಹಳೆಯ ವಿದ್ಯುತ್ ತಂತಿ ಬದಲಾವಣೆ,ಒವರ್ ಲೋಡ್ ಗೆ ಟಿ.ಸಿ. ಬದಲಾವಣೆ, ನಗರ ವ್ಯಾಪ್ತಿ ತೊಂದರೆಯಿಂದ ಅಕ್ರಮ ಸಕ್ರಮ , 94ಸಿ, ಅರಣ್ಯ ಇಲಾಖೆಯ ತೊಂದರೆಗಳು, 9/11 ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಚರ್ಚೆ ನಡೆಸಿದರು.ಈ ವೇಳೆ ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಲಾಯಿತು.ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರು, ತಹಶೀಲ್ದಾರ್ ಪ್ರಥ್ವಿ ಸಾನಿಕಂ, ಇಒ ಭವಾನಿ ಶಂಕರ್,ಪಿಡಿಒ ತಾರಾನಾಥ್ , ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದರು.