
ಬೆಳ್ತಂಗಡಿ:ದಿನದಿಂದ ದಿನ ಅಭಿವೃದ್ಧಿ ಹೊಂದುತ್ತಿರುವ ಉಜಿರೆಯಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು.ಎಂದು ಗ್ರಾಮಸ್ಥರೊಬ್ಬರು ಶಾಸಕರಲ್ಲಿ ಮನವಿ ಮಾಡಿದರು.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಉಜಿರೆ ಗ್ರಾಮ ಪಂಚಾಯತ್ ಜನಸ್ಪಂದನ ಸಭೆ ಡಿ. 8 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಉಜಿರೆ ದ್ವಾರದಿಂದ ಬೆಳಾಲು ಕ್ರಾಸ್ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ. ಎಂದು ಗ್ರಾಮಸ್ಥ ಜಗದೀಶ್ ಪ್ರಸಾದ್ ಸಭೆಯಲ್ಲಿ ತಿಳಿಸಿದಾಗ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೆಲಸ ಭರದಿಂದ ಸಾಗುತಿದ್ದು, ಕಾಮಗಾರಿಯ ನಂತರ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.

ಮುಂಡತ್ತೋಡಿ ಎಸ್ ಸಿ ಕಾಲೋನಿ ರಸ್ತೆ ಹದಗೆಟ್ಟಿದೆ ಸಮಾಜ ಕಲ್ಯಾಣ ಇಲಾಖೆಯ ಮೂಲಕ ರಸ್ತೆಯ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಜಿ.ಪಂ.ಮಾಜಿ ಸದಸ್ಯೆ ಸಿ.ಕೆ.ಚಂದ್ರಕಲಾ ಹೇಳಿದರು. ಸರ್ಕಾರ ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ,ಅದ್ದರಿಂದ ರಸ್ತೆ ದುರಸ್ತಿಯ ಸಂಪೂರ್ಣ ಭರವಸೆ ನೀಡಲು ಸಾಧ್ಯವಿಲ್ಲ ಆದರೆ ಸಮಾಜ ಕಲ್ಯಾಣ ಇಲಾಖೆ ಅನುದಾನ ಮೀಸಲಿರಿಸಿದರೆ ದುರಸ್ತಿ ಕಾರ್ಯ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಇಚ್ಚಿಲ-ಗುರಿಪಳ್ಳ ಸಂಪರ್ಕ ರಸ್ತೆಗೆ ಸ್ಥಳೀಯರೊಬ್ಬರು ಬೇಲಿ ಹಾಕಿದ್ದು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಸ್ಥಳ ಖಾಸಗಿ ವ್ಯಕ್ತಿಯೊಬ್ಬರ ಪಟ್ಟಾ ಜಾಗದಲ್ಲಿದ್ದು ಈ ಬಗ್ಗೆ ಅವರನ್ನು ಮನವೊಲಿಸಿ ದುರಸ್ತಿ ಕಾರ್ಯ ಕೈಗೊಳ್ಳಲು ಕ್ರಮ ವಹಿಸುವುದಾಗಿ ಶಾಸಕರು ಹೇಳಿದರು.

ಸರ್ವೇ ಇಲಾಖೆಗೆ ಹಿರಿಯ ವ್ಯಕ್ತಿಗಳಿಗೆ ಹೋಗಲು ಎರಡು ಮಹಡಿಯ ಮೆಟ್ಟಿಲು ಹತ್ತಲು ಕಷ್ಟವಾಗುತ್ತದೆ ಎಂದು ಹಿರಿಯ ನಾಗರೀಕರೊಬ್ಬರು ತಮ್ಮ ನೋವನ್ನು ಶಾಸಕರಲ್ಲಿ ತಿಳಿಸಿದರು. ಡಿ. 25ರ ಒಳಗೆ ಅಧಿಕೃತ 94ಸಿ ಕಡತಗಳ ವಿಲೇವಾರಿ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸರ್ವೇ ಇಲಾಖೆಗೆ ಲಿಫ್ಟ್ ವ್ಯವಸ್ಥೆ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಹೊಸ ಬಸ್ ನಿಲ್ದಾಣ ಕಟ್ಟಡದ ಮೊದಲ ಮಹಡಿಯನ್ನು ಕಂದಾಯ ಇಲಾಖೆಗೆ ಮೀಸಲಿರಿಸಲಾಗಿದೆ ಇದರಲ್ಲಿ ಸುಸಜ್ಜಿತವಾದ ಲೀಫ್ಟ್ ವ್ಯವಸ್ಥೆ ಅಳವಡಿಕೆ ಮಾಡಲಾಗುತ್ತದೆ ಎಂದು ಶಾಸಕರು ಮಾಹಿತಿ ನೀಡಿದರು.
ಪ್ರತೀ ಆರು ತಿಂಗಳಿಗೊಮ್ಮೆ ಗ್ರಾಮ ಸಭೆಗಳು ನಡೆಯುತ್ತಿದೆ ಆದರೆ ಹೆಚ್ಚಿನ ಇಲಾಖಾಧಿಕಾರಿಗಳು ಭಾಗವಹಿಸುವುದಿಲ್ಲ ಎಂದು ಸಭೆಯಲ್ಲಿ ಗ್ರಾಮಸ್ಥರು ಹೇಳಿದಾಗ ಹೋಬಳಿ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಗ್ರಾಮ ಸಭೆಗೆ ಬಿಡುವು ಮಾಡಿಕೊಂಡು ಭಾಗವಹಿಸಬೇಕು ಎಂದು ಮೇಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ಶಾಸಕರು ಪ್ರತಿಕ್ರಿಯಿಸಿದರು.
ಗ್ರಾಮ ಪಂಚಾಯತ್ ನಲ್ಲಿ ಮನೆ ತೆರಿಗೆ , ಭೂಮಿ ತೆರಿಗೆ ಪಾವತಿಸದವರಿಗೆ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗುವುದಿಲ್ಲ ಎಂದು ಬಾಲಸುಬ್ರಹ್ಮಣ್ಯ ಭಟ್ ಬೊಳಂಬಿ ಆರೋಪಿಸಿದಾಗ 95% ಕ್ಕಿಂತಲೂ ಅಧಿಕ ತೆರಿಗೆ ವಸೂಲಾತಿ ಮಾಡಲಾಗಿದೆ. ಬಾಕಿ ಇರುವವರಿಗೆ ಈಗಾಗಲೇ ನೋಟೀಸ್ ಜಾರಿ ಮಾಡಲಾಗಿದೆ ಎಂದು ಪಿಡಿಒ ಮಾಹಿತಿ ನೀಡಿದರು. ಕಕ್ಕೆಜಾಲು , ಗಾಂಧಿನಗರದಲ್ಲಿ ಕೊಳಚೆ ನೀರು ಸಾರ್ವಜನಿಕ ರಸ್ತೆಗೆ ಬರುತ್ತಿರುವ ಬಗ್ಗೆ ಗ್ರಾಮಸ್ಥರೊಬ್ಬರು ತಿಳಿಸಿದಾಗ ಕೊಳಚೆ ನೀರು ಬಿಡುವ ಮನೆಗಳಿಗೆ ನೋಟಿಸ್ ಜಾರಿ ಮಾಡುವಂತೆ ಶಾಸಕರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನ ಸಂಖ್ಯೆ ಈಗಾಗಲೇ ಹೆಚ್ಚಾಗುತಿದ್ದು
ಮುಂದೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆರಿಸುವತ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರವೀಣ್ ಫೆರ್ನಾಂಡಿಸ್ ಹೇಳಿದರು. ಪಟ್ಟಣ ಪಂಚಾಯತ್ ಆದಲ್ಲಿ ಸಾರ್ವಜನಿಕರಿಗೆ ಆಗುವ ಸಾಧಕ ಬಾಧಕಗಳನ್ನು ಚರ್ಚಿಸಿ ಜನರ ಅಭಿಪ್ರಾಯ ಸಂಗ್ರಹಿಸಿ ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.ಸಭೆಯಲ್ಲಿ
ಅಧ್ಯಕ್ಷೆ ಉಷಾಕಿರಣ್ ಕಾರಂತ್, ಉಪಾಧ್ಯಕ್ಷ ರವಿಕುಮಾರ್ ಬರಮೇಲು, ತಹಶೀಲ್ದಾರ್ ಪ್ರಥ್ವಿ ಸಾನಿಕಂ, ತಾಲೂಕು ಪಂಚಾಯತ್ ಇಓ ಭವಾನಿ ಶಂಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಕಾರ್ಯದರ್ಶಿ ಶ್ರವಣ್ ಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಪ.ಜಾತಿ.ಪ.ಪಂ.ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ ಮಾಡಲಾಯಿತು