ಹಾಸನ:ತಾಲೂಕಿನ ಮೊಸಳೆ ಹೊಸಹಳ್ಳಿ ಬಳಿ ಗಣೇಶ ವಿಸರ್ಜನಾ ಮೆರವಣಿಗೆಗೆ ವೇಳೆ ಭೀಕರ ಅಪಘಾತ ಸಂಭವಿಸಿದೆ. ದುರಂತದಲ್ಲಿ 8 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಹಾಸನದಿಂದ ಹೊಳೆನರಸಿಪುರ ಮಾರ್ಗವಾಗಿ ಹೋಗುತ್ತಿದ್ದ ಮಿನಿ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಗಣೇಶ ವಿಸರ್ಜನೆ ನಡೆಯುತ್ತಿದ್ದ ಮೆರವಣಿಗೆಗೆ ನುಗ್ಗಿದೆ. ಜನರ ಮೇಲೆ ವಾಹನ ಹರಿದ ಪರಿಣಾಮ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ 15 ಕ್ಕಿಂತಲೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಮೊಸಳೆ ಹೊಸಹಳ್ಳಿ, ಹಿರೇಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು ಎನ್ನಲಾಗಿದೆ. ಏಕಾಏಕಿ ಕ್ಯಾಂಟರ್ ಮೆರವಣಿಗೆಯ ಮೇಲೆ ನುಗ್ಗಿದ ಪರಿಣಾಮ ಈ ಘಟನೆ ಸಂಭವಿಸಿದ್ದು ಸದ್ಯ ಮೃತರನ್ನ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಗಂಭೀರ ಗಾಯಗೊಂಡವರನ್ನು ಹಾಸನ ಮತ್ತು ಹೊಳೆನರಸೀಪುರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ
ಇನ್ನು ಕೆಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಎಸ್‌ಪಿ, ಡಿವೈಎಸ್ಪಿ ಸೇರಿದಂತೆ ಗೊರೂರು ಪೊಲೀಸರು ಆಗಮಿಸಿ ಮೃತದೇಹಗಳನ್ನು ಸಾಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭೀಕರ ದುರಂತ ಸಂಭವಿಸಿದೆ.