ಬೆಳ್ತಂಗಡಿ: ರಾಜ್ಯ ಸರ್ಕಾರ ಹಿಂದೂಗಳ ವಿರುದ್ಧವಾಗಿ ಷಡ್ಯಂತ್ರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಅವರು ಸೋಮವಾರ ಧರ್ಮಸ್ಥಳದಲ್ಲಿ ಬಿಜೆಪಿ ವತಿಯಿಂದ ನಡೆದ ಧರ್ಮಸ್ಥಳ ಚಲೋ ನಮ್ಮ ನಡಿಗೆ ಧರ್ಮದೆಡೆಗೆ ಬೃಹತ್ ಸಮಾವೇಶವನ್ನು ಉದ್ಘಾಟಿಸಿ, ಬುರುಡೆ ಸರ್ಕಾರಕ್ಕೆ ಧಿಕ್ಕಾರ, ಷಡ್ಯಂತ್ರ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆಯೊಂದಿಗೆ ತಮ್ಮ ಭಾಷಣ ಪ್ರಾರಂಭಿಸಿದರು.
ಸಮಗ್ರ ಸಮಾಜವೇ ಇದನ್ನು ತಿರಸ್ಕಾರ ಮಾಡಬೇಕು ಎಂದು ಅವರು, ಹೂತ ಶವವನ್ನು ಹೊರತೆಗೆಯಬೇಕಾದರೆ ನ್ಯಾಯಾಧೀಶರ ಅನುಮತಿ ಪಡೆಯಬೇಕು. ಮುಸುಕಧಾರಿಯಾಗಿದ್ದ ಅನಾಮಿಕ ಕಾಂಗ್ರೆಸ್ ಪಕ್ಷದ ಸ್ನೇಹಿತ ಎಂದು ಹೇಳಿದ ಸಚಿವರು ಮೂರು ಮಂದಿ ಐ.ಪಿ.ಎಸ್. ಅಧಿಕಾರಿಗಳಿದ್ದರೂ ಧರ್ಮಸ್ಥಳದಲ್ಲಿ ತ್ಯಾಗ ಮತ್ತು ಅಹಿಂಸಾ ಸಂದೇಶ ಸಾರಿದ ಬಾಹುಬಲಿ ಬೆಟ್ಟದಲ್ಲಿಯೂ ಶವ ಹೂತಿರುವುದಾಗಿ ಮುಸುಕುಧಾರಿ ಹೇಳಿದನೆಂದು ಅಲ್ಲಿ ಕೂಡಾ ಹೊಂಡ ತೆಗೆದಿರುವುದು ಅಚ್ಚರಿ ಉಂಟುಮಾಡಿದೆ. ಅನ್ಯ ಧರ್ಮದವರ ಶ್ರದ್ಧಾಕೇಂದ್ರದ ಬಳಿ ಆದರೆ ಅವರು ಈ ರೀತಿ ಮಾಡುತ್ತಿದ್ದರೆ ಎಂದು ಸಚಿವರು ಯಕ್ಷಪ್ರಶ್ನೆ ಹಾಕಿದರು.
ದೇಶದ ಹಿತಕ್ಕಾಗಿ ಹಿಂದೂ ಸಮಾಜದ ಸಂಘಟನೆಯೊಂದಿಗೆ ಎಲ್ಲರೂ ಸದಾ ಜಾಗೃತರಾಗಿರಬೇಕು.
ದೇಶ ವಿಭಜನೆಯ ಕಾಲದಿಂದಲೂ ಕಾಂಗ್ರೆಸ್ ವೋಟುಬ್ಯಾಂಕ್‌ಗಾಗಿ ರಾಜಕಾರಣ ಮಾಡುತ್ತಿದೆ. ಧರ್ಮಸ್ಥಳದ ಬಳಿಕ ರಾಜ್ಯ ಸರಕಾರ ಚಾಮುಂಡಿಬೆಟ್ಟಕ್ಕೆ ಕೈ ಹಾಕಿದೆ. ಅನ್ಯ ಧರ್ಮೀಯರನ್ನು ದಸರಾ ಹಬ್ಬ ಉದ್ಘಾಟನೆಗೆ ಆಹ್ವಾನಿಸಿದೆ. ಮೂರ್ತಿ ಪೂಜೆ ಒಪ್ಪದವರನ್ನು ತಂದು ಹಿಂದೂ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದ ಅವರು ಆರೋಪಿಸಿದರು.
ಬಿ.ಜೆ.ಪಿ.ಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ.
ದೂರುದಾರನ ಪ್ರಾಥಮಿಕ ವಿಚಾರಣೆ ಹಾಗೂ ತನಿಖೆಯನ್ನೂ ಮಾಡದೆ, ಎಸ್.ಐ.ಟಿ. ರಚಿಸಿರುವುದನ್ನು ಅವರು ಖಂಡಿಸಿದರು.
ಸೌಜನ್ಯ ಹತ್ಯೆ ಪ್ರಕರಣ ಈಗೀನ ಸರಕಾರ ಮರು ತನಿಖೆ ನಡೆಸಬೇಕು. ಸೌಜನ್ಯಳ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ರಾಜ್ಯ ಬಿ.ಜೆ.ಪಿ. ಪಕ್ಷವು ಸರಕಾರ ಮರುತನಿಖೆಗೆ ಆದೇಶ ನೀಡಿದರೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಅವರು ಭರವಸೆ ನೀಡಿದರು.
ಚಾಮುಂಡಿ ಬೆಟ್ಟದ ಬಗ್ಯೆಯೂ ರಾಜಕೀಯ ಮಾಡಿರುವುದನ್ನು ಖಂಡಿಸಿದ ಅವರು ಕಾಂಗ್ರೆಸ್ ಸರ್ಕಾರ ಕಿತ್ತೊಸೆಯುವ ತನಕ ಹಿಂದೂಗಳು ಸಮ್ಮನೆ ಕೂರಲಾರರು ಎಂದು ಎಚ್ಚರಿಕೆ ನೀಡಿದರು.
ಧರ್ಮಸ್ಥಳದ ಕುರಿತು ಅಪಪ್ರಚಾರವನ್ನು ಖಂಡಿಸಿದ ಅವರು, ಕೋಟ್ಯಾಂತರ ಭಕ್ತರಿಗೆ ತೀವ್ರ ನೋವಾಗಿದೆ. ಹಿಂದೂಗಳ ತಾಳ್ಮೆಯ ಪರೀಕ್ಷೆ ಮಾಡಬೇಡಿ. ಧರ್ಮಸ್ಥಳ ಚಲೊ ಕಾರ್ಯಕ್ರಮವನ್ನು ಹಗುರವಾಗಿ ಪರಿಗಣಿಸಬೇಡಿ. ಬುರುಡೆ ಪ್ರಕರಣವನ್ನು ಎಸ್ಐಟಿಗೆ ಒಪ್ಪಿಸಿದೆ. ಹಿಂದೂ ದೇವಾಲಯದ ಮೇಲೆ ಯಾರೋ ಅನ್ಯ ಮತೀಯ ವಿಡಿಯೋ ಮಾಡಿ ಹಾಕಿದ್ದನ್ನೇ ಕೇಂದ್ರವಾಗಿಟ್ಟುಕೊಂಡು ಸರಕಾರ ಬುರುಡೆ ಅಗೆಯಲು ಹೊರಟಿದೆ. ಆತನನ್ನು ಸರಿಯಾಗಿ ತನಿಖೆ ನಡೆಸದೇ ಸರಕಾರ ಪರೋಕ್ಷವಾಗಿ ಬೆಂಬಲ ನೀಡುವಂತಿದೆ. ಇದರ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಬೇಕಾದರೆ
ಸಮಗ್ರ ತನಿಖೆಗಾಗಿ ಈ
ಪ್ರಕರಣವನ್ನು ಸಿ.ಬಿ.ಐ. ಅಥವಾ ಎನ್.ಐ.ಎ.ಗೆ ಒಪ್ಪಿಸಬೇಕು. ಪ್ರಕರಣವನ್ನು ಇತ್ಯರ್ಥಗೊಳಿಸಬೇಕು. ಇಲ್ಲವಾದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಪ್ರತಿಪಕ್ಷ ನಾಯಕ ಆರ್. ಅಶೋಕ “ಬುರುಡೆ ಸಿದ್ಧರಾಮಯ್ಯನಿಗೆ ಧಿಕ್ಕಾರ” ಎಂದು ಭಾಷಣ ಪ್ರಾರಂಭಿಸಿ, ಸಿದ್ದರಾಮಯ್ಯ ಸುತ್ತ ನಕ್ಸಲ್ ಗ್ಯಾಂಗ್ ಹಾಗೂ ನಗರ ನಕ್ಸಲರ ಕೈವಾಡವಿದೆ. ಎಸ್.ಐ.ಟಿ. ಕೇವಲ ಕೆರೆಯ ಮೀನುಗಳನ್ನು ಹಿಡಿದಿದೆ. ಸಮುದ್ರ ತಿಮಿಂಗಿಲಗಳನ್ನು ಹಿಡಿಯಬೇಕು. ಎಸ್.ಐ.ಎ. ಗೆ ಪ್ರಕರಣ ಹಸ್ತಾಂತರಿಸಿದರೆ ಮಾತ್ರ ನ್ಯಾಯ ಸಿಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾತ್ಯಾತೀತ ಹೆಸರಿನಲ್ಲಿ ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಅವರು ಧರ್ಮಸ್ಥಳದ ಭಕ್ತರ ಕ್ಷಮೆ ಕೇಳಬೇಕು. ನಾಡಿನ ಜನತೆಯ ಶಾಪದಿಂದ ರಾಜ್ಯ ಸರ್ಕಾರ ಸದ್ಯದಲ್ಲೆ ಪತನವಾಗುವುದು ಖಚಿತ ಎಂದು ಭವಿಷ್ಯ ನುಡಿದರು.
ಸಿ.ಟಿ. ರವಿ ಮಾತನಾಡಿ, ದೂರುದಾರನ ಹಿನ್ನೆಲೆ ತಿಳಿಯದೆ, ಮಂಪರು ಪರೀಕ್ಷೆ ಮಾಡದೆ ಎಡಪಂಥೀಯರ ಮಾತು ಕೇಳಿ ಎಸ್.ಐ.ಟಿಗೆ ಪ್ರಕರಣ ಒಪ್ಪಿಸಿರುವುದು ಸರಿಯಲ್ಲ. ದೆಹಲಿಯಿಂದ ಹಿಡಿದು ಚೆನ್ನೈ ತನಕ ಇದರ ಜಾಲ ಹಬ್ಬಿದೆ. ಎಲ್ಲಾ ವಿಚಾರಗಳು ಬಹಿರಂಗ ಆಗಬೇಕಾದರೆ ಎನ್ಐಎಗೆ ಪ್ರಕರಣವನ್ನು ಒಪ್ಪಿಸಬೇಕು. ಷಡ್ಯಂತ್ರ ಅಡಗಿದೆ ಎಂದು ಸರಕಾರದ ಕೆಲ ಸಚಿವರೇ ಹೇಳಿಕೊಂಡಿದ್ದಾರೆ. ಆ ಷಡ್ಯಂತ್ರ ಏನೆಂದು ಬಹಿರಂಗ ಆಗಬೇಕಾದರೆ ಎನ್ಐಎ ತನಿಖೆ ಸೂಕ್ತ ಎಂದರು.
ಬಿಜೆಪಿ ರಾಜ್ಯ ಉಸ್ತುವಾರಿ ಸುಧಾಕರ ರೆಡ್ಡಿ, ವಿಧಾನ ಪರಿಷತ್ ವಿಪಕ್ಷ ನಾಯಕ
ಛಲವಾದಿ ನಾರಾಯಣ ಸ್ವಾಮಿ, ಮಾಜಿ ಸಚಿವ ಶ್ರೀರಾಮುಲು, ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ ಎಸ್ಐಟಿ ತನಿಖೆ ಹಾಗೂ ಬುರುಡೆ ಪ್ರಕರಣದ ಜತೆ ಷಡ್ಯಂತ್ರ ರೂಪಿಸಿದ ಅನಾಮಿಕ ಹಾಗೂ ಅವರ ಜತೆಗಿರುವವರ ವರ್ತನೆಯನ್ನು ಖಂಡಿಸಿದರು.
ವೇದಿಕೆಯಲ್ಲಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ, ಸಂಸದರಾದ
ತೇಜಸ್ವಿಸೂರ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ,
ಡಾ. ಸಿ. ಮಂಜುನಾಥ್,
ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ
ಸುನೀಲ್ ಕುಮಾರ್,
ಸುರೇಶ್ ಗೌಡ, ತಮ್ಮೇಶ್ ಗೌಡ, ಸಿಮೆಂಟ್ ಮಂಜು,
ಧಿರಾಜ್ ಮುನಿರಾಜ್, ದೊಡ್ಡಣ್ಣ ಗೌಡ ಪಾಟೀಲ್,
ಮುನಿರತ್ನ, ಬಿ.ಸಿ.ಪಾಟೀಲ್, ದಿನಕರ ಶೆಟ್ಟಿ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ರಾಜೇಶ್ ನಾಯ್ಕ್, ಯಶಪಾಲ್ ಸುವರ್ಣ, ಗುರುರಾಜ ಗಂಟಿಹೊಳೆ,
ಮಾಜಿ ಶಾಸಕರಾದ
ಪ್ರೀತಂ ಗೌಡ, ರೇಣುಕಾಚಾರ್ಯ, ಸಂಜೀವ ಮಠಂದೂರು, ಅಪ್ಪಚ್ಚು ರಂಜನ್, ಕ್ಯಾ. ಗಣೇಶ್ ಕಾರ್ಣಿಕ್,
ವಿಧಾನಪರಿಷತ್ ಸದಸ್ಯರಾದ ರವಿಕುಮಾರ್, ಭಾರತಿ ಶೆಟ್ಟಿ, ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್ ಹಾಗೂ ರಾಜ್ಯದ ಸಂಸದರು, ಶಾಸಕರುಗಳು, ಮಾಜಿ ಸಂಸದರು, ಶಾಸಕರುಗಳು, ಬಿಜೆಪಿ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕುಗಳ ಅಧ್ಯಕ್ಷರುಗಳು ಸೇರಿದಂತೆ ಮೊದಲಾದವರು ಇದ್ದರು.
ಧರ್ಮಸ್ಥಳ ಚಲೋ ಕಾರ್ಯಕ್ರಮ ಸಂಚಾಲಕ, ಶಾಸಕ ಎಸ್.ಆರ್. ವಿಶ್ವನಾಥ್ ಪ್ರಸ್ತಾವಿಸಿ ಮಾತನಾಡಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು.
ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಕಾರ್ಯಕ್ರಮ ನಿರ್ವಹಿಸಿದರು.
ರಾಜ್ಯ ಬಿಜೆಪಿ ವತಿಯಿಂದ ಧರ್ಮಸ್ಥಳ ಚಲೋ ಬೃಹತ್ ಸಮಾವೇಶವು ಕೇಸರಿಮಯವಾಗಿತ್ತು. ಪಕ್ಷದ ಧ್ವಜವನ್ನು ಬಳಸದೇ ಧಾರ್ಮಿಕ ಕ್ಷೇತ್ರದ ರಕ್ಷಣೆಗಾಗಿ ಕೇಸರಿ ಧ್ವಜಗಳು ಹಾಗೂ ಕೇಸರಿ ಶಾಲುಗಳು ರಾರಾಜಿಸಿದವು.
ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಭಾಷಣ ಮಾಡುವ ಮುಂಚಿತವಾಗಿ ಎಲ್ಲಾ ಕಾರ್ಯಕರ್ತರು ಕೇಸರಿ ಶಾಲುಗಳನ್ನು ತಿರುಗಿಸುತ್ತಾ ಧರ್ಮ ರಕ್ಷಣೆಯ
ಜೈಕಾರವನ್ನು ಹಾಕಿದರು.
ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲನೆಗೊಳಿಸುವ ಮೂಲಕ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿದರು.
ಬಳಿಕ ಭಾರತ ಮಾತೆಯ ಭಾವಚಿತ್ರಕ್ಕೆ ಎಲ್ಲಾ ಗಣ್ಯರು ಪುಷ್ಪಾರ್ಚನೆ ಮಾಡಿದರು.
ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಂದೇಶ ಕಳುಹಿಸಿದ್ದು, ಅದನ್ನು ಎಂಎಲ್ಸಿ ಪ್ರತಾಪಸಿಂಹ ನಾಯಕ್ ಸಭೆಯಲ್ಲಿ ವಾಚಿಸಿದರು.
ರಾಜ್ಯದ ನಾನ ಭಾಗಗಳಿಂದ ಸಹಸ್ರಾರು ಮಂದಿ ಕಾರ್ಯಕರ್ತರು ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಂದ ಧರ್ಮ ಭಕ್ತರು ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ದರ್ಶನ ಪಡೆದು, ಅನ್ನ ದಾಸೋಹವನ್ನು ಸ್ವೀಕರಿಸಿದರು.