ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಎಸ್ಐಟಿ ತಂಡದಿಂದ ಬುಧವಾರ ನಡೆದ ಕಾರ್ಯಾಚರಣೆ ಬೆನ್ನಲ್ಲೇ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿ ಸುಳ್ಳು ಸುದ್ಧಿ ಪ್ರಸಾರ ಮಾಡುತಿದ್ದಾರೆ ಎಂದು ಆರೋಪಿಸಿ ಮೂವರು ಯೂಟ್ಯೂಬರ್ಸ್ ಗಳ ಮೇಲೆ ಸ್ಥಳೀಯ ಗುಂಪೊಂದು ಹಲ್ಲೆ ನಡೆಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಧರ್ಮಸ್ಥಳದಲ್ಲಿ ಕಳೆದ ಕೆಲವು ದಿನಗಳಿಂದ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಹಾಗೂ ಅಧಿಕಾರಿಗಳ ತಂಡ ಅನಾಮಧೇಯ ವ್ಯಕ್ತಿ ಗುರುತಿಸಿದ ಸ್ಥಳದಲ್ಲಿ ಶೋಧ ಕಾರ್ಯವನ್ನು ನಡೆಸುತಿದ್ದು, ಈ ಬಗ್ಗೆ ಸುಳ್ಳು ಸುದ್ಧಿಗಳನ್ನು ಹಾಗೂ ಧರ್ಮಸ್ಥಳದ ವಿರುದ್ಧ ಮಾನಹಾನಿ ವರದಿಗಳನ್ನು ಯೂಟ್ಯೂಬರ್ ಗಳು ಮಾಡುತಿದ್ದಾರೆ.
ಎಸ್ಐಟಿ ಕಾರ್ಯಚರಣೆ ಬಗ್ಗೆ ಯಾವುದೇ ಮಾಹಿತಿ ನೀಡದಿದ್ದರೂ,ಯೂಟ್ಯೂಬ್ ಗಳಲ್ಲಿ ಏನೇನೊ ಸುಳ್ಳು ಸುದ್ಧಿಗಳನ್ನು ಪ್ರಸಾರ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿ ಬುಧವಾರ ಸಂಜೆ ನೇತ್ರಾವತಿ ಬಳಿಯ ಮಣ್ಣಸಂಕದ ಎಂಬಲ್ಲಿಯ ಪಾಂಗಾಳ ಕ್ರಾಸ್ ಬಳಿ ಯೂಟ್ಯೂಬರ್ ಗಳಾದ ಕುಡ್ಲ ರಾಂಪೇಜ್ ನ ಅಜಯ್ ಅಂಚನ್, ಯುನೈಟೆಡ್ ನ ಅಭಿಷೇಕ್, ಹಾಗೂ ಸಂಚಾರಿ ಸ್ಟುಡಿಯೋ ಸಂತೋಷ್ ಹಾಗೂ ಕ್ಯಾಮರಮ್ಯಾನ್ ಮೇಲೆ ಸ್ಥಳೀಯರು ಧರ್ಮಸ್ಥಳದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿರಾ ಎಂದು ಹಲ್ಲೆ ಮಾಡಿ ಕ್ಯಾಮರಗಳನ್ನು ಹಾಗೂ ವಾಹನಗಳಿಗೆ ಹಾನಿ ಮಾಡಿದ್ದಾರೆ . ಈ ಬಗ್ಗೆ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಯೂ ಸೌಜನ್ಯ ಹೋರಾಟಗಾರರು ಸೇರಿದ್ದು , ವರದಿ ಮಾಡಲು ತೆರಳಿದ್ದ ಸುವರ್ಣ ನ್ಯೂಸ್ ಚಾನಲ್ ನ ಸಿಬ್ಬಂದಿಗಳಿಗೆ ತಿಮರೋಡಿ ಗ್ಯಾಂಗ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ ಟಿ. ಸಮೀರ್ ಸೇರಿದಂತೆ ಇತರರ ವಿರುದ್ದ ಪ್ರಕರಣ ದಾಖಲಾಗಿದೆ.
ಧರ್ಮಸ್ಥಳ ಠಾಣೆ ಎದುರು ರಾತ್ರಿ ಸೇರಿದ ಸ್ಥಳೀಯರು ಸುಳ್ಳು ಸುದ್ದಿ ಪ್ರಸಾರ ಮಾಡುವವರ ವಿರುದ್ಧ ಕ್ರಮ. ಕೈಗೊಳ್ಳಿ ಎಂದು ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.ಈ ವೇಳೆ ಇತ್ತಂಡಗಳ ಗುಂಪು ಸೇರಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗುವುದನ್ನು ಅರಿತ ಪೊಲೀಸರು ಸೈರನ್ ಹಾಗೂ ಧ್ವನಿವರ್ಧಕದ ಮೂಲಕ ಸ್ಥಳದಿಂದ ತೆರಳುವಂತೆ ಎಚ್ಚರಿಕೆ ಸಂದೇಶ ಕೊಟ್ಟರೂ ಗುಂಪು ಹೋಗದೇ ಇದ್ದಾಗ ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.ಸ್ಥಳಕ್ಕೆ ಎಸ್ ಪಿ. ಅವರು ಭೇಟಿ ನೀಡಿದರು.