ಬೆಂಗಳೂರು:ಧರ್ಮಸ್ಥಳದಲ್ಲಿ ಶವ ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕ್ಕ ಕಾರ್ಡ್ಗಳ ವಾರೀಸುದಾರರು ನೆಲಮಂಗಲ ನಿವಾಸಿಗಳು ಎಂದು ತಿಳಿದು ಬಂದಿದೆ.
ಅನಾಮಧೇಯ ವ್ಯಕ್ತಿ ನೀಡಿರುವ ದೂರಿನಂತೆ ನೇತ್ರಾವತಿ ಸ್ನಾನ ಘಟ್ಟದ ಅರಣ್ಯದಲ್ಲಿ ಆತ ಸೂಚಿಸಿದ 13 ಕಡೆ ಸ್ಥಳಗಳನ್ನು ಎಸ್ಐಟಿ ಗುರುತು ಮಾಡಿತ್ತು. ಕಳೆದ ನಾಲ್ಕು ದಿನಗಳಿಂದ ಗುರುತು ಮಾಡಿರುವ ಸ್ಥಳಗಳಲ್ಲಿ ಎಸ್ಐಟಿ ಕಾರ್ಮಿಕರ ಹಾಗೂ ಯಂತ್ರದ ಮೂಲಕ ಶೋಧ ಕಾರ್ಯ ಆರಂಭಿಸಿತು.ಮೊದಲನೇ ದಿನ ಮಾರ್ಕ್ ನಂಬ್ರ 01 ರಲ್ಲಿ ಬಟ್ಟೆ ಹಾಗೂ ಪ್ಯಾನ್ ಕಾರ್ಡ್, ಡೆಬಿಟ್ ಕಾರ್ಡ್ ಸಿಕ್ಕಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಅದರೆ
ಇದೀಗ ಈ ಕಾರ್ಡ್ಗಳ ವಾರಸುದಾರರ ಪತ್ತೆಯಾಗಿದ್ದು, ನೆಲಮಂಗಲದ ದಾಬಸ್ ಪೇಟೆಯ ನಿವಾಸಿಗಳಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಎರಡು ಕಾರ್ಡ್ಗಳು ಸುರೇಶ್ ಮತ್ತು ಸಿದ್ದಲಕ್ಷ್ಮಮ್ಮರವರಿಗೆ ಸೇರಿದ್ದು, ಇವರು ತಾಯಿ ಮಗನಾಗಿದ್ದಾರೆ.
ಪ್ಯಾನ್ ಕಾರ್ಡ್ಗೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದಲಕ್ಷ್ಮಮ್ಮ, “ನನ್ನ ಮಗ ಸುರೇಶ್ ಜಾಂಡಿಸ್ ರೋಗದಿಂದ ಬಳಲುತ್ತಿದ್ದ, ಇದೇ ಮಾರ್ಚ್ ತಿಂಗಳಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ. ನಮ್ಮ ತೋಟದಲ್ಲಿಯೇ ಆತನ ಸಮಾಧಿ ಮಾಡಲಾಗಿದೆ” ಎಂದು ಹೇಳಿದರು.
ನನ್ನ ಎಟಿಎಂ ಕಾರ್ಡ್ ಮಗನ ಬಳಿಯೇ ಇರುತ್ತಿತ್ತು. ಆತ ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಆಗಾಗ ಹೋಗಿ ಬರುತ್ತಿದ್ದ. ಈ ಹಿಂದೆ ಪರ್ಸ್ ಕಳೆದು ಹೋಗಿದೆ ಎಂದು ಮನೆಯಲ್ಲಿ ಬಿಟ್ಟುಹೋಗಿದ್ದೇನೆ ಅಂತ ಇಲ್ಲಿ ಹುಡುಕಾಡಿದ್ದ. ಆದರೆ ಮನೆಯಲ್ಲಿ ಸಿಕ್ಕಿರಲಿಲ್ಲ. ಆಮೇಲೆ ನನ್ನ ಏಟಿಎಂ ಕಾರ್ಡ್ ಲಾಕ್ ಮಾಡಿಸಿ ಹೊಸ ಎಟಿಎಂ ಕಾರ್ಡ್ ಮಾಡಿಸಿಕೊಂಡಿದ್ದೇನೆ. ಅವನೂ ಕೂಡ ಹೊಸ ಪಾನ್ ಕಾರ್ಡ್ ಮಾಡಿಸಿಕೊಂಡಿದ್ದ. ಧರ್ಮಸ್ಥಳದಲ್ಲಿ ಸಿಕ್ಕ ಪ್ಯಾನ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್ಗೆ ಸಂಬಂಧಿಸಿದಂತೆ ಪೊಲೀಸರು ಮನೆಗೆ ಬಂದು ವಿಚಾರಣೆ ನಡೆಸಿದರು. ಅವರಿಗೆ ಮಾಹಿತಿ ನೀಡಿದ್ದೇವೆ” ಎಂದರು.
ಸಿದ್ದಲಕ್ಷ್ಮಮ್ಮ ಅವರ ಮಗಳು ರೂಪ ಅವರು ಮಾತನಾಡಿ, “ನನ್ನ ಸಹೋದರ ಎಲ್ಲಾ ಕಳೆದುಕೊಂಡಿದ್ದ. ಆಗ ಪೊಲೀಸ್ ಕಂಪ್ಲೈಂಟ್ ಏನೂ ಕೊಟ್ಟಿರಲಿಲ್ಲ. ತಾಯಿಯ ಡೆಬಿಟ್ ಕಾರ್ಡ್ ಬ್ಲಾಕ್ ಮಾಡಿಸಿದ್ವಿ. ಧರ್ಮಸ್ಥಳದಲ್ಲಿ ಅವನ ಪಾನ್ ಕಾರ್ಡ್ ಹಾಗೂ ತಾಯಿಯ ಡೆಬಿಟ್ ಕಾರ್ಡ್ ಸಿಕ್ಕಿರುವ ಬಗ್ಗೆ ವಿಚಾರಿಸಲು ಪೊಲೀಸ್ ಮನೆಗೆ ಬಂದಿದ್ದರು. ಆಗ ಅವನು ತೀರಿಕೊಂಡಿರುವ ಬಗ್ಗೆ ಮಾಹಿತಿ ಹಾಗೂ ಅವನ ಫೋಟೋ ಕೇಳಿದ್ರು. ಎಲ್ಲಾ ಕೊಟ್ಟಿದ್ದೇವೆ. ಚೆನ್ನಾಗಿದ್ದಾಗ ಸ್ನೇಹಿತರ ಜೊತೆಗೆ ಧರ್ಮಸ್ಥಳಕ್ಕೆ ಟ್ರಿಪ್ ಹೋಗುತ್ತಿದ್ದ. ಆಗ ಅಲ್ಲಿ ಕಳೆದುಕೊಂಡಿರಬಹುದು. ಆಗ ಮನೆಗೆ ಬಂದು ಇಲ್ಲೇ ಬಿಟ್ಟು ಹೋಗಿದ್ದೇನೆ ಅಂತ ಬಂದು ಹುಡುಕಾಡಿದ್ದ” ಎಂದು ತಿಳಿಸಿದರು.