
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ 6ನೇ ಗುರುತು ಮಾಡಿದ ಸ್ಥಳದಲ್ಲಿ ಅಸ್ಥಿಪಂಜರದ ಕುರುಹುಗಳು ಸಿಕ್ಕಿದ್ದು, ಮೂರನೇ ದಿನವಾದ ಇಂದು ಬೆಳಗ್ಗೆ 11:30 ರ ಸುಮಾರಿಗೆ ನೇತ್ರಾವತಿ ಬಳಿಯ ಅರಣ್ಯ ಪ್ರದೇಶಕ್ಕೆ ಎಸ್.ಐ. ಟಿ ಅಧಿಕಾರಿಗಳು ದೂರುದಾರನನ್ನು ಕರೆದುಕೊಂಡು ಬಂದು ಪೌರಕಾರ್ಮಿಕರಿಂದ ಮತ್ತು ಮಿನಿ ಹಿಟಾಚಿಯಿಂದ 7 ಮತ್ತು 8 ನೇ ಗುರುತು ಮಾಡಿದ ಜಾಗದಲ್ಲಿ ಕಾರ್ಯಾಚರಣೆ ನಡೆಸಿದ್ರೂ ಯಾವುದೇ ಕುರುಹುಗಳು ಸಿಕ್ಕಿಲ್ಲ , ಇನ್ನುಳಿದಂತೆ ಸಂಜೆಯಾಗಿರುವುದರಿಂದ ಮಾರ್ಕ್ ಮಾಡಿದ ಇತರ ಸ್ಥಳಗಳಲ್ಲಿ ನಾಳೆ ಕಾರ್ಯಚರಣೆ ನಡೆಸುವ ಮಾಹಿತಿ ಲಭ್ಯವಾಗಿದೆ.ದೂರುದಾರ ಸೂಚಿಸಿದ 13 ಸ್ಥಳಗಳ ಪೈಕಿ ಈಗಾಗಲೇ 8 ಕಡೆಗಳಲ್ಲಿ ಕಾರ್ಮಿಕರು ಹಾಗೂ ಯಂತ್ರದ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. ಇನ್ನು ಉಳಿದ 5 ಜಾಗದಲ್ಲಿ ಶೋಧ ಕಾರ್ಯ ನಡೆಯಲಿಕ್ಕಿದೆ. ಇನ್ನು ಉಳಿದ ಮಾರ್ಕ್ ಮಾಡಿದ ನಾಲ್ಕು ಕಡೆಗಳಲ್ಲಿ ಒಂದಕ್ಕಿಂತ ಹೆಚ್ಚು ಹಾಗೂ ಗುರುತು ಸಂಖ್ಯೆ 13 ರಲ್ಲಿ ಹಲವು ಶವಗಳನ್ನು ಹೂತು ಹಾಕಲಾಗಿದೆ ಎಂಬ ಬಗ್ಗೆ ಮುಸುಕುದಾರಿ ವ್ಯಕ್ತಿ ತಿಳಿಸಿದ್ದು,ಅದಲ್ಲದೇ ಹೆದ್ದಾರಿಯಿಂದ ಕೆಲವೇ ಅಂತರದಲ್ಲಿ ಮಾರ್ಕ್ ಮಾಡಿದ ಜಾಗ ಇರುವುದರಿಂದ ನಾಳೆಯಿಂದ ನಡೆಯುವ ಕಾರ್ಯಾಚರಣೆ ಮತ್ತಷ್ಟು ಕುತೂಹಲ ಕೆರಳಿಸಲಿದೆ.
ಧರ್ಮಸ್ಥಳ ಗ್ರಾ.ಪಂ ನಿಂದ ದಾಖಲೆ ಪಡೆದ ಎಸ್ಐಟಿ.
ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಆಗಸ್ಟ್1 ರಂದು ಸಂಜೆ ಎಸ್.ಐ.ಟಿ ಇನ್ಸ್ಪೆಕ್ಟರ್ ಮಂಜುನಾಥ್ ತಂಡ ಧರ್ಮಸ್ಥಳ ಗ್ರಾಮ ಪಂಚಾಯತಿಗೆ ಆಗಮಿಸಿ 1995 ರಿಂದ 2014 ರ ವರೆಗಿನ ಯುಡಿಆರ್ ದಾಖಲೆಗಳನ್ನು ಪಡೆದುಕೊಂಡು ಹೋಗಿರುವ ಮಾಹಿತಿ ಲಭ್ಯವಾಗಿದೆ.