ಜೂ 08 ರಂದು ಭಕ್ತಿ ಹೆಜ್ಜೆ ಬಳಗದಿಂದ ವಿಶೇಷ ಕಾರ್ಯಕ್ರಮಗಳನ್ನು: ಭಜಕೆರೆ ಗೊಬ್ಬು, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ:

 

 

 

 

ಬೆಳ್ತಂಗಡಿ:  ಭಜಕರನ್ನು  ಒಂದೆಡೆ ಸೇರಿಸುವ ನಿಟ್ಟಿನಲ್ಲಿ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ತಾಲೂಕು ಮಟ್ಟದ  ಭಜಕೆರೆ ಗೊಬ್ಬು ವಿಶೇಷ ಕಾರ್ಯಕ್ರಮ ನಡೆಯಲಿದೆ. ದೇವ ಭಕ್ತಿಯ ಜೊತೆಗೆ ದೇಶ ಭಕ್ತಿಯ ಜಾಗೃತಿ ಮೂಡಿಸುವ ಮೂಲಕ ಸಂಘಟನಾತ್ಮಕವಾಗಿ ಭಜಕರನ್ನು ಒಗ್ಗೂಡಿಸುವ ಕಾರ್ಯ ಜರುಗಲಿದೆ ಎಂದು ಬೆಳ್ತಂಗಡಿ ಭಕ್ತಿಹೆಜ್ಜೆ ಬಳಗದ ಸಂಚಾಲಕ ಹರೀಶ್ ನೆರಿಯ ಹೇಳಿದರು.

ಗುರುವಾರ ಬೆಳ್ತಂಗಡಿ ವಿವೇಕಾನಂದ ಸೇವಾ ಟ್ರಸ್ಟ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳ್ತಂಗಡಿ ಭಕ್ತಿಹೆಜ್ಜೆ ಬಳಗ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಭಜನಾ ಮಂಡಳಿಗಳ ಒಗ್ಗೂಡುವಿಕೆಯಲ್ಲಿ, ಡಾ | ಡಿ. ವೀರೇಂದ್ರ ಹೆಗ್ಗಡೆಯವರ ಶುಭಶೀರ್ವಾದಗಳೊಂದಿಗೆ, ಶರತ್ ಕೃಷ್ಣ ಪಡ್ವೇಟ್ನಾಯರವರ ಮಾರ್ಗದರ್ಶನದಲ್ಲಿ ಭಜಕೆರೆ ಗೊಬ್ಬು, ಭಜಕ ಸಮ್ಮಿಲನ ಮತ್ತು ಪ್ರತಿಭಾ ಪುರಸ್ಕಾರ ಜೂನ್ 08 ರಂದು ಉಜಿರೆ ಶಾರದಾ ಮಂಟಪದಲ್ಲಿ ಬೆಳಗ್ಗೆ 9.30ಕ್ಕೆ ನಡೆಯಲಿದೆ. ಬೆಳ್ತಂಗಡಿ ತಾಲೂಕಿನ ಎಲ್ಲಾ ಭಜಕರನ್ನು ಸಂಘಟನಾ ವ್ಯಾಪ್ತಿಯಲ್ಲಿ ಜೊತೆ ಸೇರಿಸುವ ಮೊದಲ ಪ್ರಯತ್ನ ಜೊತೆಗೆ ತಾಲೂಕಿನ ಎಸ್ ಎಸ್ ಎಲ್ ಸಿ, ಹಾಗೂ ಪಿ ಯು ಸಿ ಯಲ್ಲಿ 85% ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿರುವ 100ಕ್ಕೂ ಭಜಕ ವಿದ್ಯಾರ್ಥಿಗಳನ್ನು ಹಾಗೂ ಪ್ರತಿ ಭಜನಾ ತಂಡದ ಪ್ರಮುಖ ಸಂಘಟಕರನ್ನು ಗುರುತಿಸಿ ಗೌರವಿಸಲಾಗುವುದು. ಬೆಳಗ್ಗೆ ವಿಷ್ಣುಸಹಸ್ರನಾಮ ಪಠಣ, ಶಾರದಾ ಮಂಟಪಕ್ಕೆ ಪಥಸಂಚಲನ ಮೂಲಕ ಭಜಕರ ಆಗಮನ, ಭಜನಾ ಅಂತ್ಯಕ್ಷರಿ, ಪುರಾಣ ರಸಪ್ರಶ್ನೆ ಸಹಿತ ವಿಭಾಗವಾರು ಮನೋರಂಜನಾತ್ಮಕ ಸ್ಪರ್ಧೆಗಳು ನಡೆಯಲಿದ್ದು ಗುಂಪು ಸ್ಪರ್ಧೆಗಳಿಗೆ ಸ್ಥಳದಲ್ಲೆ ತಂಡವನ್ನು ರಚಿಸಲಾಗುವುದು ಎಂದು ತಿಳಿಸಿದರು.

ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರಾದ ಶರತ್ ಕೃಷ್ಣ ಪಡ್ವೇಟ್ನಾಯ ಸಮಾರಂಭ ಉದ್ಘಾಟಿಸುವರು. ಉಜಿರೆ ಬದುಕು ಕಟ್ಟೋಣ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಹಾಗೂ ಪೆರ್ಲ ಶ್ರೀರಾಜರಾಜೇಶ್ವರಿ ಭಜನಾ ಮಂಡಳಿ ಗೌರವಾಧ್ಯಕ್ಷ ತ್ಯಾಂಪಣ್ಣ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಲಿರುವರು. ಶಾಸಕ ಹರೀಶ್ ಪೂಂಜ, ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿ.ಪಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಉದ್ಯಮಿ ಕಿರಣ್‌ಚಂದ್ರ ಡಿ.ಪುಷ್ಪಗಿರಿ ಸಹಿತ ಮತ್ತಿತರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ೪ಕ್ಕೆ ಸಮಾರೋಪ ಸಮಾರಂಭದಲ್ಲಿ ಬಳಗದ ಸಂಚಾಲಕ ಹರೀಶ್ ನೆರಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳಾಲು ಶ್ರೀ ಕ್ಷೇತ್ರ ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಸಹಿತ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಳಗದ ಸದಸ್ಯರಾದ ದಿನೇಶ್ ಗೌಡ, ಗೀತಾ ರಾಮಣ್ಣ ಗೌಡ ಹಾಗೂ ಸಚಿನ್ ಉಪಸ್ಥಿತರಿದ್ದರು.

error: Content is protected !!