ಡಿಸಿ ಮನ್ನಾ ಜಮೀನು ಹಂಚಿಕೆಗೆ ಒತ್ತಾಯ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭೇಟಿ ಮಾಡಿದ ದಲಿತ ಮುಖಂಡರು

 

ಬೆಳ್ತಂಗಡಿ: ಪ.ಜಾತಿ/ಪಂಗಡಗಳ ಹಲವು ವರ್ಷಗಳ ಬೇಡಿಕೆಯಾಗಿರುವ ಡಿಸಿ ಮನ್ನಾ ಜಮೀನು ಹಂಚಿಕೆಗೆ ಸಂಬಂಧಿಸಿದಂತೆ ತಾಲೂಕಿನ ದಲಿತ ನಾಯಕರು ಬೆಂಗಳೂರಿನಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹಾಗೂ ಬ್ಲಾಕ್ ಕಾಂಗ್ರೆಸ್ (ನಗರ) ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಅವರ ನೇತೃತ್ವದಲ್ಲಿ ದಲಿತ ಮುಖಂಡರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾದರು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಡಿಸಿ ಮನ್ನಾ ಜಮೀನು ಹಂಚಿಕೆ ಮಾಡುವ ಕುರಿತು ಭರವಸೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಣಾಳಿಕೆಯಲ್ಲಿನ ಭರವಸೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಅಗತ್ಯ ಆದೇಶ ಹೊರಡಿಸುವಂತೆ ಮುಖಂಡರು ಬಿ.ಕೆ. ಹರಿಪ್ರಸಾದ್ ಅವರ ಗಮನ ಸೆಳೆದರು.
ಮನವಿಯನ್ನು ಆಲಿಸಿದ ಬಿ.ಕೆ. ಹರಿಪ್ರಸಾದ್ ಅವರು, ಡಿಸಿ ಮನ್ನಾ ಜಮೀನು ಹಂಚಿಕೆ ವಿಚಾರವಾಗಿ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ದಲಿತ ಮುಖಂಡರಾದ ಗಣೇಶ್ ಪ್ರಸಾದ್ ಮೂಡಬಿದಿರೆ, ಬಿ.ಕೆ. ವಸಂತ್, ಬೇಬಿ ಸುವರ್ಣ, ವೆಂಕಣ್ಣ ಕೊಯ್ಯೂರು, ನೇಮಿರಾಜ್ ಕಿಲ್ಲೂರು, ರಮೇಶ್ ಆರ್., ರವಿಚಂದ್ರ ನಾಯ್ಕ್ ಮುಂಡಾಜೆ, ಪ್ರಭಾಕರ್ ಶಾಂತಿಗೋಡು, ಚೆನ್ನಕೇಶವ ಹಾಗೂ ಶೇಖರ್ ಲಾಯಿಲ ಉಪಸ್ಥಿತರಿದ್ದರು.

error: Content is protected !!