ಪುತ್ತೂರು ನಗರಸಭಾ ಸದಸ್ಯ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯ..!: ಪಾಣೆಮಂಗಳೂರು ಹಳೇ ಸೇತುವೆ ಬಳಿ ಮೃತ ದೇಹ ಪತ್ತೆ: ಆರೋಗ್ಯ ಸಮಸ್ಯೆಯೋ ಆರ್ಥಿಕ ಅಡಚಣೆಯೋ ಕಾರಣ ನಿಗೂಢ:

 

 

 

ಬಂಟ್ವಾಳ: ಪುತ್ತೂರಿನ ನಗರಸಭಾ ಸದಸ್ಯ ರಮೇಶ್ ರೈ ಅವರ ಮೃತದೇಹ ಪಾಣೆಮಂಗಳೂರಿನ ನೇತ್ರಾವತಿ ನದಿಯ ಹಳೇ ಸೇತುವೆ ಬಳಿ ಪತ್ತೆಯಾಗಿದೆ. ರಮೇಶ್ ರೈ ಅವರು ಇತ್ತೀಚೆಗೆ ನಡೆದ ಪುತ್ತೂರು ನಗರಸಭೆಯ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಯಾಗಿ ನೆಲ್ಲಿಕಟ್ಟೆ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು.

ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಪಾಣೆಮಂಗಳೂರು ಹಳೆ ಸೇತುವೆಯ ಕೆಳಭಾಗದಲ್ಲಿ ಬೈಕ್ ಅಂಗಿ ಮೊಬೈಲ್ ಮತ್ತು ಚಪ್ಪಲಿ ಬಿದ್ದಿರುವುದನ್ನು ಗಮನಿಸಿ, ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೊಬೈಲ್​​ನಿಂದ ಕಾಂಟ್ಯಾಕ್ಟ್​ ಗಳನ್ನು ಸಂಪರ್ಕಿಸಿದಾಗ ಇದು ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ಅವರದ್ದು ಎಂದು ತಿಳಿದು ಬಂದಿದೆ. ಕೂಡಲೇ ಮನೆಯವರಿಗೆ ಮಾಹಿತಿ ನೀಡಲಾಗಿದೆ. ಪುತ್ತೂರಿನಿಂದ ರೈ ಸಂಬಂಧಿಕರು ಆಗಮಿಸಿ ಖಚಿತಪಡಿಸಿದ್ದರು.

ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳೀಯರ ಹಾಗೂ ಈಜು ಪಟುಗಳ ನೆರವಿನಿಂದ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

ಇವರು ಸಜ್ಜನ ರಾಜಕಾರಣಿ ಎಂದೇ ಚಿರಪರಿಚಿತರಾಗಿದ್ದರು. ಆರೋಗ್ಯ ಸಮಸ್ಯೆ ಅಥವಾ ಹಣಕಾಸಿನ ಸಮಸ್ಯೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂದು ಹೇಳಲಾಗುತ್ತಿದೆ.

ಕುಟುಂಬ ಸದಸ್ಯರು ಮೃತದೇಹವನ್ನು ಗುರುತಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಕುಟುಂಬ ವರ್ಗ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಪುತ್ತೂರಿನ ನಗರಸಭಾ ಸದಸ್ಯರೊಬ್ಬರು ಕಣ್ಮರೆಯಾಗಿರುವ ವಿಚಾರ ತಿಳಿದು ಬಿಜೆಪಿಯ ಪ್ರಮುಖರು ಸ್ಥಳಕ್ಕೆ ಆಗಮಿಸಿದರು. ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ಸಹಿತ ಪುತ್ತೂರಿನ ಬಿಜೆಪಿ ಪ್ರಮುಖರು, ಬಂಟ್ವಾಳದ ಬಿಜೆಪಿ ಪ್ರಮಖರು ಸ್ಥಳಕ್ಕೆ ಆಗಮಿಸಿದ್ದರು.

error: Content is protected !!