ಬೆಳ್ತಂಗಡಿ: ಬುಧವಾರ ಬೀಸಿದ ಭಾರೀ ಗಾಳಿಗೆ ಉಜಿರೆ ಧರ್ಮಸ್ಥಳ ಹೆದ್ದಾರಿ ಬದಿಯ ಮರವೊಂದು ರಸ್ತೆಯಲ್ಲಿ ಸಂಚರಿಸುತಿದ್ದ ಬೈಕ್ ಮೇಲೆ ಬಿದ್ದು ಅದೃಷ್ಟವಶಾತ್ ಸವಾರ ಅಪಾಯದಿಂದ ಪಾರಾದ ಬೆನ್ನಲ್ಲೇ ಇದೀಗ ಉಜಿರೆ ಗ್ರಾಮ ಪಂಚಾಯತ್ ಅಪಾಯಕಾರಿ ಮರಗಳ ಗೆಲ್ಲು ತೆರವುಗೊಳಿಸುವ ಕೆಲಸ ಪ್ರಾರಂಭಿಸಿದೆ. ಕಳೆದ ಕೆಲವು ವರ್ಷಗಳ ಹಿಂದೆ ಸಿದ್ದವನ ಬಳಿ ಮರವೊಂದು ಕಾರಿನ ಮೇಲೆ ಬಿದ್ದು ಪ್ರಾಣಹಾನಿ ಸಂಭವಿಸಿತ್ತಲ್ಲದೇ ಕಳೆದ ತಿಂಗಳು ಜಾರಿಗೆ ಬೈಲು ಎಂಬಲ್ಲಿ ಬೈಕಲ್ಲಿ ಮನೆಗೆ ಬರುತಿದ್ದ ಬೆಳಾಲು ಯುವಕನ ಮೇಲೆ ಮರ ಬಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು.
ಅದಲ್ಲದೇ ಬೆಳಾಲು ಕ್ರಾಸ್ ಬಳಿ ಮೊನ್ನೆ ಮರವೊಂದು ಹೈಮಾಸ್ಕ್ ಲೈಟ್ ಕಂಬದ ಮೇಲೆ ಬಿದ್ದು ಕಂಬ ತುಂಡಾಗಿ ಬಿದಿದ್ದು, ಈ ಎಲ್ಲ ಘಟನೆಗಳ ಅಪಾಯಗಳನ್ನರಿತು ಮುಂಜಾಗರೂಕತೆಗಾಗಿ ಅಪಾಯಕಾರಿ ಮರಗಳ ಕೊಂಬೆ ತೆರವು ಕೆಲಸ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಉಸ್ತುವಾರಿಯಲ್ಲಿ ನಡೆಯುತ್ತಿದೆ.ಅರಣ್ಯ ಇಲಾಖೆ, ಮೆಸ್ಕಾಂ ಪವರ್ ಮ್ಯಾನ್ ಗಳು , ವಿಪತ್ತು ತಂಡದ ಸದಸ್ಯರು ತೆರವು ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.