ಎಲ್ಲೆಂದರಲ್ಲಿ ಟ್ಯಾಟೂ ಹಾಕಿಸಿಕೊಳ್ಳುವ ಟ್ಯಾಟೂ ಪ್ರಿಯರೇ ಎಚ್ಚರ. ಟ್ಯಾಟೂನಿಂದ ಹೆಚ್‌ಐವಿ, ಕ್ಯಾನ್ಸರ್‌ನಂತಹ ಅಪಾಯಕಾರಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಆರೋಗ್ಯ ಇಲಾಖೆ ಅಲರ್ಟ್ ಘೊಷಿಸಿದ ಬೆನ್ನಲ್ಲೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ಜಾರಿಯಾಗುವ ಸಾಧ್ಯತೆ ಎಂಬ ಮಾಹಿತಿ ಲಭ್ಯವಾಗಿದೆ.
ಚರ್ಮ ಕ್ಯಾನ್ಸರ್, ಹೆಚ್‌ಐವಿ ಹಾಗೂ ಚರ್ಮ ರೋಗ, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ ಹಾಗೂ ಸ್ಟ್ಯಾಫಿಲೋಕೊಕಸ್ ಔರೆಸ್‌ನಂತಹ ಮಾರಣಾಂತಿಕ ಸೋಂಕುಗಳು ಜನರಲ್ಲಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತಪಾಸಣೆ ನಡೆಸಿದಾಗ ಈ ಸೋಂಕುಗಳು ಹರಡಲು ಟ್ಯೂಟೂ ಕೂಡ ಒಂದು ಕಾರಣವಾಗಿದೆ ಎಂದು ತಿಳಿದುಬಂದಿದೆ.
ದೇಶದಲ್ಲಿ ಟ್ಯಾಟೂಗೆ ಯಾವುದೇ ನಿಯಂತ್ರಣ ಕಾನೂನುಗಳಿಲ್ಲ. ಆದರೆ ಆರೋಗ್ಯ ಇಲಾಖೆಯ ಮಾಹಿತಿ ಬೆನ್ನಲ್ಲೆ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಟ್ಯಾಟೂಗೆ ಹೊಸ ನಿಯಮ ಜಾರಿಗೆ ತರಲು ನಿರ್ಧರಿಸಿದೆ. ಈ ಕಾನೂನಿನ ಮೂಲಕ ಅವೈಜ್ಞಾನಿಕವಾಗಿ, ಬೇಕಾಬಿಟ್ಟಿಯಾಗಿ, ಎಲ್ಲೆಂದರಲ್ಲಿ ಟ್ಯಾಟೂ ಹಾಕುವುದಕ್ಕೆ ಕಡಿವಾಣ ಹಾಕಲಿದೆ.
ಸರ್ಕಾರವು ಟ್ಯಾಟೂ ಹಾಕಿಸಿಕೊಳ್ಳುವ ಮತ್ತು ಹಾಕುವವರಮೇಲೆ ಈ ಹೊಸ ಕಾನೂನು ಜಾರಿಗೆ ತರಲು ಯೋಜಿಸಿದೆ. ಟ್ಯಾಟೂ ಹಾಕಿಸಿಕೊಳ್ಳುವರು ಕಡ್ಡಾಯವಾಗಿ ವೈದ್ಯರಿಂದ ತಪಾಸಣೆ ಪತ್ರ ಪಡೆದಿರಬೇಕು. ಟ್ಯಾಟೂ ಹಾಕುವವರು ತಾವು ಬಳಸುವ ಬಣ್ಣ, ಕ್ಯಮಿಕಲ್, ಸೂಜಿ ಮತ್ತು ಸ್ವಚ್ಛತೆ ಕುರಿತಾಗಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತಹ ಹೊಸ ಮಾರ್ಗಸೂಚಿಗಳನ್ನು ತರಲಿದೆ ಎಂದು ತಿಳಿದು ಬಂದಿದೆ.
ಅನೈರ್ಮಲ್ಯದಿಂದ ಉಂಟಾಗುವ ಸೋಂಕು ತಡೆಯುವ ಉದ್ದೇಶ ಹಾಗೂ ಚರ್ಮದ ಕ್ಯಾನ್ಸರ್ ಮತ್ತು ಹೆಚ್‌ಐವಿಯಂತಹ ಸೋಂಕುಗಳ ಅಪಾಯವನ್ನು ಕಡಿಮೆ ಮಾಡುವುದು ಈ ಹೊಸ ಕಾನೂನಿನ ಉದ್ದೇಶವಾಗಿದೆ.