ಸಾಂದರ್ಭಿಕ ಚಿತ್ರ
ಬೆಳ್ತಂಗಡಿ : ಪತಿಯ ದೈಹಿಕ ಹಲ್ಲೆ ಮತ್ತು ಅತ್ತೆ, ನಾದಿನಿಯ ನಿರಂತರ ಮಾನಸಿಕ ಕಿರುಕುಳದಿಂದ ನೊಂದ ಮಹಿಳೆಯೊಬ್ಬರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಎರ್ಮಾಳಪಳಿಕೆ ಎಂಬಲ್ಲಿ ನಡೆದಿದ್ದು, ಮಹಿಳೆ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಜೂರು ಜಿ.ನಗರ ನಿವಾಸಿ ಕೂಲಿ ಕಾರ್ಮಿಕ ಹಮೀದ್ ಅವರ ಪುತ್ರಿಯನ್ನು ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಎರ್ಮಾಳ್‌ಪಲ್ಕೆ ನಿವಾಸಿ ಫಾರೂಕ್ ಎಂಬಾತನಿಗೆ ಎರಡು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಪತಿಯ ಮನೆಯಲ್ಲಿ ಆಕೆಗೆ ಪತಿ, ಅತ್ತೆ ಮತ್ತು ನಾದಿನಿ, ನಿರಂತರ ಮಾನಸಿಕ ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಮಹಿಳೆಯ ಪತಿ ತನ್ನ ತಾಯಿ ಮತ್ತು ಸಹೋದರಿಯ ಒಪ್ಪಿಗೆ ಇಲ್ಲದೆ ಪತ್ನಿಗೆ ಯಾವುದೇ ಅನುಕೂಲಗಳನ್ನು ನೀಡುತ್ತಿರಲಿಲ್ಲ. ಖರ್ಚಿಗೆ ಒಂದು ರೂಪಾಯಿ ದುಡ್ಡೂ ನೀಡುತ್ತಿರಲಿಲ್ಲ. ಅಲ್ಲದೆ ಏನಾದರೊಂದು ಕಾರಣ ಸೃಷ್ಟಿಸಿ ನಿತ್ಯ ಜಗಳವಾಡುವುದು, ಅದಕ್ಕೆ ತಾಯಿ ಮತ್ತು ಆತನ ಸಹೋದರಿ (ನಾದಿನಿ) ಕುಮ್ಮಕ್ಕು ನೀಡುತ್ತಿದ್ದುದರಿಂದ, ಇದನ್ನು ಸಹಿಸಿಕೊಳ್ಳಲಾಗದೆ ಮಹಿಳೆ ಇರುವೆ ನಿಯಂತ್ರಣಕ್ಕೆ ಉಪಯೋಗಿಸುವ ವಿಷಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಪತಿ ಹೆಲ್ಪ್ಲೈನ್ ಹೆಸರಿನ ಸಮಾಜ ಸೇವಾ ಗುಂಪುಗಳಲ್ಲಿ ಗುರುತಿಸಿಕೊಂಡವನಾಗಿದ್ದು, ದಂಪತಿಗೆ ಒಂದು ಗಂಡು ಮಗು ಕೂಡ ಇದೆ.
ಗಂಭೀರ ಸ್ಥಿತಿಯಲ್ಲಿರುವ ಮಹಿಳೆ ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.