ಸಾಂದರ್ಭಿಕ ಚಿತ್ರ
ಮಡಿಕೇರಿ: ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಗರ್ಭಿಣಿಯರಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಕೇವಲ ಒಂಬತ್ತು ತಿಂಗಳಲ್ಲಿ 30 ಮಂದಿ ಅಪ್ರಾಪ್ತೆಯರು ಗರ್ಭಿಣಿಯರಾಗಿರುವುದು ಬೆಳಕಿಗೆ ಬಂದಿದೆ.
ಈವರೆಗೆ 59 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, 30 ಅಪ್ರಾಪ್ತೆಯರ ಪೈಕಿ ಈಗಾಗಲೇ 14 ಬಾಲಕಿಯರಿಗೆ ಹೆರಿಗೆ ಆಗಿದೆ. ಘಟನೆ ಜಿಲ್ಲಾಡಳಿತದ ನಿದ್ದೆಗಡಿಸಿದೆ.
ಅಪ್ರಾಪ್ತೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಹೆಚ್ಚಾಗಿದ್ದು ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದಲ್ಲೇ 43 ಸಂತ್ರಸ್ತೆಯರು ಪತ್ತೆಯಾಗಿದ್ದಾರೆ. ವಿರಾಜಪೇಟೆ, ಪೊನ್ನಂಪೇಟೆಯಲ್ಲಿ ಅಪ್ರಾಪ್ತ ಗರ್ಭಿಣಿ ಸಂಖ್ಯೆ ಹೆಚ್ಚಿದ್ದು, ತೋಟದ ಮನೆಗಳಲ್ಲೇ ಬಾಲಕಿಯರ ಮೇಲೆ ಹೆಚ್ಚು ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎನ್ನಲಾಗಿದೆ.
ಇಂತಹ ಪ್ರಕರಣ ತಡೆಗಟ್ಟಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆದಿದೆ. ಈರೀತಿಯ ಪ್ರಕರಣಗಳು ಹೆಚ್ಚಾಗಲು ಕಾರಣವೇನು? ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಏನೇನು ಮಾಡಬೇಕು? ಲೈಂಗಿಕ ದೌರ್ಜನ್ಯದಂತಹ ಅನ್ಯಾಯಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಪ್ರಾಪ್ತ ಬಾಲಕಿಯರನ್ನು ಹಾಗೂ ಇತರ ಸಮುದಾಯಗಳ ಬಾಲಕಿಯರ ರಕ್ಷಣೆಗೆ ಏನು ಮಾಡಬೇಕು ಎಂಬ ಬಗ್ಗೆ ಜಿಲ್ಲಾಡಳಿತ ಸಮಲೋಚನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.