ಹಾಸನ: ಮೊಬೈಲ್ ನಂಬರ್ ತಪ್ಪಿ ಹೋಗುವ ಕರೆಗೆ ಎಷ್ಟೋ ಜನ ಕ್ಷಮಿಸಿ ಅಂತ ಹೇಳಿ ಆಮೇಲೆ ಸುಮ್ನಾಗ್ತಾರೆ. ಆದ್ರೆ ಟೈಲರ್ ಒಬ್ಬರು ಆಕಸ್ಮಿಕವಾಗಿ ತಪ್ಪಿ ಕರೆ ಮಾಡಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕೊಲೆ ಮಾಡಿದ ಹಂತಕರಿಗೆ ನ್ಯಾಯಾಲಯ 6 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಏನಿದು ಘಟನೆ : ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಊಪಿನಹಳ್ಳಿ ಗ್ರಾಮದ ಗಂಗಾಧರ್ (42) ಎಂಬವರು ಕಳೆದ 20 ವರ್ಷಗಳಿಂದ ಪಟ್ಟಣದ ಕೆ.ಆರ್.ವೃತ್ತದ ಬಳಿ ಎಂ.ಜಿ. ಟೈಲರ್ ಎಂಬ ಅಂಗಡಿ ಇಟ್ಟುಕೊಂಡಿದ್ದರು. ಎರಡೂವರೆ ವರ್ಷಗಳ ಹಿಂದೆ ಮೃತ ಗಂಗಾಧರ್ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುವಾಗ, ತಮ್ಮ ಮೊಬೈಲ್‌ನಿಂದ ಗ್ರಾಹಕರೊಬ್ಬರಿಗೆ ಕರೆ ಮಾಡಲು ಹೋಗಿ ಒಂದು ನಂಬರ್ ತಪ್ಪಾಗಿ ಓರ್ವ ಮಹಿಳೆಗೆ ಕರೆ ಹೋಗಿತ್ತು. ಆದರೆ, ಆ ಕರೆ ರಿಂಗ್ ಆದ ಬಳಿಕ ಕಟ್ ಮಾಡಿ, ಸರಿಯಾದ ನಂಬರ್‌ಗೆ ಫೋನ್ ಮಾಡಿ ಮಾತನಾಡಿದ್ದರು.
ಕೆಲ ಸಮಯದ ಬಳಿಕ ಅದೇ ನಂಬರ್ನಿಂದ ಗಂಗಾಧರ್‌ಗೆ ಫೋನ್ ಬಂದಿತ್ತು. ಗಂಗಾಧರ್ “ಯಾರಿಗೋ ಕರೆ ಮಾಡಲು ಹೋಗಿ ಒಂದು ನಂಬರ್ ತಪ್ಪಾಗಿ ನಿಮಗೆ ಬಂತು” ಎಂದು ಕರೆ ಕಟ್ ಮಾಡಿದ್ದರು. ಆದರೆ ಆ ಮಹಿಳೆ ಮತ್ತೆ ಕರೆ ಮಾಡಿ “ನೀವು ಬೇಕು ಅಂತಲೆ ಕರೆ ಮಾಡಿದ್ದೀರಾ” ಎಂದು ಜೋರಾಗಿ ಮಾತಾನಾಡಲು ಪ್ರಾರಂಭಿಸಿದಾಗ, ಮೃತ ಗಂಗಾಧರ್ ಕೂಡ ಸ್ವಲ್ಪ ಜೋರಾಗಿ ಮಾತನಾಡಿದ್ದರು. ನಂತರ ಸಿಟ್ಟಿನಿಂದ ಆಕೆಗೆ ಬೈದು ಕರೆ ಕಟ್ ಮಾಡಿದ್ದರು. ಕೊನೆಗೆ ತನ್ನದಲ್ಲದ ತಪ್ಪಿಗೆ ಒಂದು ಮೆಸೇಜ್ ಮೂಲಕ ಕ್ಷಮೆಯನ್ನೂ ಕೇಳಿದ್ದರು.
ಈ ವಿಚಾರವನ್ನು ಮಹಿಳೆ ತನ್ನ ಪತಿ ಭರತ್‌ಗೆ ಹೇಳಿದ್ದು, ಸಿಟ್ಟಾದ ಭರತ್ ತನ್ನ ಸ್ನೇಹಿತರೊಂದಿಗೆ ಚನ್ನರಾಯಪಟ್ಟಣದ ಎಂ.ಜಿ. ಟೈಲರ್ ಶಾಪ್‌ಗೆ ಆಗಮಿಸಿ ಗಂಗಾಧರ್ ಅವರನ್ನು ಕಿಡ್ನಾಪ್ ಮಾಡಿದ್ದರು. ಶ್ರವಣಬೆಳಗೊಳ ರಸ್ತೆಯ ಜನಿವಾರ ಗ್ರಾಮದ ಬಳಿಯಿರುವ ರೈಲ್ವೆ ಟ್ರ‍್ಯಾಕ್ ಬಳಿಗೆ ಕರೆತಂದು ಭಯಗೊಳಿಸುವ ಭರದಲ್ಲಿ ಅವರಿಗೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದರು. ಈ ವೇಳೆ, ಆಕಸ್ಮಿಕವಾಗಿ ಗಂಗಾಧರ್ ಅಲ್ಲಿಯೇ ಕುಸಿದು ಬಿದ್ದಿದ್ದರು. ಸ್ಥಳಕ್ಕೆ ಬಂದ ಸ್ಥಳೀಯರನ್ನು ನೋಡಿ ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಗಂಗಾಧರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
ಈ ಕುರಿತು ಮೃತರ ಪತ್ನಿ ಹಾಗೂ ಸ್ನೇಹಿತರು ನೀಡಿದ ದೂರಿನ ಆಧಾರದ ಮೇಲೆ ಚನ್ನರಾಯಪಟ್ಟಣ ತಾಲೂಕು ಜನಿವಾರ ಗ್ರಾಮದ ಭರತ್ (34), ಅಭಿಷೇಕ್ ಅಲಿಯಾಸ್ ಕಬಾಬ್ ಅಭಿ (29), ಚಿರಂಜೀವಿ (27), ಅಭಿ ಅಲಿಯಾಸ್ ರೆಬಲ್ ಅಭಿ (32), ಸೋಮಶೇಖರ್ ( 33), ಕುಮಾರ್ ಅಲಿಯಾಸ್ ಕಳ್ಳ ಕುಮಾರ್ ಈ 6 ಮಂದಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದ ಆರೋಪಿಗಳು ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಮೃತ ಕುಟುಂಬಕ್ಕೆ 37 ಲಕ್ಷ ಕೊಡುವುದಾಗಿ ರಾಜಿ – ಸಂಧಾನ ಮಾಡಿಕೊಂಡು, ಮೃತನ ಕುಟುಂಬಕ್ಕೆ ಮುಂಗಡವಾಗಿ 25 ಲಕ್ಷ ನೀಡಿದ್ದರು. ಜೊತೆಗೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷಿ ಹೇಳಿಸಿದ್ದರು.
ಈ ವಿಚಾರ ನ್ಯಾಯಾಧೀಶರ ಗಮನಕ್ಕೆ ಬಂದು, ಆರೋಪಿಗಳು ತಮಗಿಷ್ಟ ಬಂದಂತೆ ಕೊಲೆ ಮಾಡಿ ರಾಜಿ ಸಂಧಾನ ಮಾಡಿಕೊಳ್ಳುವುದಾದರೇ, ಪೊಲೀಸರೇಕೆ? ನ್ಯಾಯಾಲಯವೇಕೆ? ಎಂದು ಗರಂ ಆಗಿದ್ದರು.
ಆರೋಪಿಗಳು ಲಕ್ಷಾಂತರ ಹಣದಿಂದ ನಾಶ ಮಾಡಿದ್ದ ಮಾನವ ಸಾಕ್ಷಿಗಳ ಬದಲಿಗೆ ಡಿಜಿಟರ್ ಸಾಕ್ಷಿಗಳಾದ ಮರಣೋತ್ತರ ಪರೀಕ್ಷೆ ವರದಿ, ಶ್ವಾನದಳ ಪರೀಕ್ಷೆ, ಬೆರಳಚ್ಚು ತಜ್ಞರ ವರದಿ, ಫೋನ್ ರೆಕಾರ್ಡ್, ಕೊಲೆಗೆ ಬಳಸಿದ ವಾಹನ ಹೀಗೆ ಹತ್ತು ಹಲವು ಸಾಕ್ಷಿಗಳನ್ನು ತನಿಖಾಧಿಕಾರಿಗಳಿಂದ ಸಂಗ್ರಹಿಸಿಕೊಂಡು ವಿಶೇಷ ಪ್ರಕರಣ ಎಂದು ಭಾವಿಸಿದ ಚನ್ನರಾಯಪಟ್ಟಣ 4ನೇ ಜೆ.ಎಂ.ಎಫ್.ಸಿ ನ್ಯಾಯಾಧೀಶ ವಿ.ಎನ್. ಜಗದೀಶ್ ಡಿಜಿಟಲ್ ಸಾಕ್ಷ್ಯಾಧಾರಗಳ ಆಧಾರದ ಮೂಲಕ ಗಂಗಾಧರ್ ಕೊಲೆಯೂ ಈ 6 ಮಂದಿಯಿAದಲೇ ನಡೆದಿರುವುದು ಎಂದು ತಮಗಿರುವ ಪರಮೋಚ್ಚ ಅಧಿಕಾರವನ್ನು ಬಳಸಿಕೊಂಡು ತೀರ್ಪು ನೀಡಿದ್ದಾರೆ. ಆರೋಪಿಗಳಿಗೆ ತಲಾ 6 ವರ್ಷಗಳ ಕಾಲ ಶಿಕ್ಷೆ ವಿಧಿಸಿದ್ದಾರೆ.
ತನಿಖಾಧಿಕಾರಿಯಾಗಿ ಚನ್ನರಾಯಪಟ್ಟಣ ನಗರ ಠಾಣೆಯ ವೃತ್ತ ನಿರೀಕ್ಷಕ ವಸಂತ್, ಸಹಾಯಕ ತನಿಖಾಧಿಕಾರಿ ಮುಖ್ಯ ಪೇದೆ ರಂಗಸ್ವಾಮಿ ಸೇರಿದಂತೆ ಹಲವರು ಪ್ರಕರಣಕ್ಕೆ ಸಂಬAಧಿಸಿದ ತಾಂತ್ರಿಕ ಸಾಕ್ಷ್ಯಗಳನ್ನು ಒದಗಿಸಿದ್ದರು. ಸರ್ಕಾರಿ ಅಭಿಯೋಜಕ ವಕೀಲ ಸಿ.ಡಿ.ಶ್ರೀನಿವಾಸ್ ಮೃತರ ಪರ ವಾದ ಮಂಡಿಸಿದ್ದರು.