ಮುಂಬೈ : ಬಾಲಿವುಡ್‌ನ ಬಹುಬೇಡಿಕೆಯ ನಟ ಸೈಫ್ ಅಲಿ ಖಾನ್‌ಗೆ ಚೂರಿ ಇರಿತ ಪ್ರಕರಣದಲ್ಲಿ ಯಾರನ್ನೂ ವಶಕ್ಕೆ ಪಡೆಯಲಾಗಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನೋರ್ವನನ್ನು ವಶಕ್ಕೆ ಪಡೆಯಲಾಗಿತ್ತು, ಬಾಂದ್ರಾ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ವ್ಯಕ್ತಿಯನ್ನು ಕರೆತರಲಾಗಿದೆ ಎಂದು ವರದಿಯಾಗಿತ್ತು. ಅಲ್ಲದೆ ವಿಡಿಯೋ ಕೂಡಾ ವೈರಲ್ ಆಗಿತ್ತು. ಆದ್ರೀಗ ಪೊಲೀಸರು, ಆ ವ್ಯಕ್ತಿ ಸೈಫ್ ಅಲಿ ಖಾನ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ.
ದಾಳಿಯಲ್ಲಿ ಭಾಗಿಯಾಗಿರುವ ಆರೋಪಿ ಬಾಂದ್ರಾ ರೈಲು ನಿಲ್ದಾಣದ ಬಳಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಾನೆ. ಅವರನ್ನು ಬಂಧಿಸಲು ಶೋಧ ನಡೆಯುತ್ತಿದೆ. ಘಟನೆಯ ನಂತರ, ಶಂಕಿತನು ಬೆಳಿಗ್ಗೆ ಮೊದಲ ಸ್ಥಳೀಯ ರೈಲನ್ನು ಹಿಡಿದು ವಸೈ ವಿರಾರ್ ಕಡೆಗೆ ಹೋಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಮುಂಬೈ ಪೊಲೀಸ್ ತಂಡಗಳು ವಸೈ, ನಲಸೋಪಾರ ಮತ್ತು ವಿರಾರ್ ಪ್ರದೇಶಗಳಲ್ಲಿ ಶೋಧ ನಡೆಸುತ್ತಿವೆ ಎಂದರು.
ಸೈಫ್ ಅವರ ಬೆನ್ನಿನಿಂದ ಹೊರತೆಗೆದ ಬ್ಲೇಡ್‌ನ ಒಂದು ಭಾಗವನ್ನು ವಶಪಡಿಸಿಕೊಂಡಿದ್ದೇವೆ ಎಂದಿರುವ ಮುಂಬೈ ಪೊಲೀಸರು ಉಳಿದ ಭಾಗವನ್ನು ಪಡೆಯುವ ಪ್ರಯತ್ನ ನಡೆಯುತ್ತಿವೆ.
ಪ್ರಕರಣದ ಕುರಿತು ಮಾತನಾಡಿದ ಸಚಿವ ಯೋಗೇಶ್ ಕದಮ್ “ಈ ಘಟನೆಯಲ್ಲಿ ಯಾವುದೇ ಗ್ಯಾಂಗ್ ಭಾಗಿಯಾಗಿಲ್ಲ. ಇದು ಕೇವಲ ಕಳ್ಳತನದ ಪ್ರಯತ್ನವಾಗಿತ್ತು. ಸೈಫ್ ಅಲಿ ಖಾನ್ ಎಂದಿಗೂ ಯಾವುದೇ ಭದ್ರತೆಯನ್ನು ಕೇಳಿಲ್ಲ. ಹಾಗಾಗಿ ಈ ದಾಳಿ ಯಾವುದೇ ಗ್ಯಾಂಗ್‌ನ ಭಾಗವಾಗಿರಲಿಲ್ಲ. ಆರೋಪಿ ಕಳ್ಳತನದ ಉದ್ದೇಶದಿಂದಲೇ ಮನೆಗೆ ಪ್ರವೇಶಿಸಿದ್ದನು. ಸೈಫ್ ಅಲಿ ಖಾನ್ ಮತ್ತು ಆರೋಪಿ ನಡುವೆ ಜಗಳ ನಡೆದಿದ್ದು, ಘಟನೆಯಲ್ಲಿ ನಟ ಗಾಯಗೊಂಡಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ನಟನ ಆರೋಗ್ಯದಲ್ಲಿ ಚೇತರಿಕೆ: ಐಸಿಯುನಿಂದ ವಿಶೇಷ ಕೊಠಡಿಗೆ ಸ್ಥಳಾಂತರ
ಘಟನಾ ಸಂದರ್ಭ ಆರೋಪಿಯು ನಟನಿಗೆ 6 ಬಾರಿ ಚೂರಿ ಇರಿದಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಈ ಹಿನ್ನಲೆ ಲೀಲಾವತಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದ ನಟ ಈಗ ಚೇತರಿಕೆ ಕಂಡಿದ್ದು ಐಸಿಯುನಿಂದ ವಿಶೇಷ ಕೊಠಡಿಗೆ ಸ್ಥಳಾಂತಗೊಂಡಿದ್ದಾರೆ.
ಸೈಫ್ ಅಲಿ ಖಾನ್ ಆರೋಗ್ಯದ ಬಗ್ಗೆ ಮಾತನಾಡಿದ ವೈದ್ಯ ನಿತಿನ್ ಡಾಂಗೆ, “ನಟ ಸುರಕ್ಷಿತವಾಗಿದ್ದಾರೆ, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ದೃಢಪಡಿಸಿದರು.