ಬೀದರ್: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಎಟಿಎಂ ದರೋಡೆ ಘಟನೆಯ ಹಿಂದೆ ಮಾಸ್ಟರ್‌ಮೈಂಡ್ ಅಮಿತ್ ಕುಮಾರ್ ಕೈವಾಡ ಶಂಕೆ ವ್ಯಕ್ತವಾಗಿದೆ. ಆರೋಪಿಗಳ ಬಂಧನಕ್ಕೆ 10 ವಿಶೇಷ ತಂಡಗಳು ರಚನೆಯಾಗಿದ್ದು ಭಾರೀ ಕಾರ್ಯಾಚರಣೆ ನಡೆಯುತ್ತಿದೆ.
ಬೀದರ್‌ನಲ್ಲಿ ಎಟಿಎಂ ದರೋಡೆ ಮಾಡಿದ ಕಳ್ಳರು, ರಾಯ್‌ಪುರ ಮೂಲಕ ಬಿಹಾರಕ್ಕೆ ಪಲಾಯನ ಮಾಡಿದೆ ಎಂದು ಪೊಲೀಸರು ಊಹಿಸಿದ್ದಾರೆ. ಹೀಗಾಗಿ ಬಿಹಾರದಲ್ಲಿ ದರೋಡೆ ಮತ್ತು ಕಳ್ಳತನದ ದೀರ್ಘ ಇತಿಹಾಸ ಹೊಂದಿರುವ ಅಮಿತ್ ಕುಮಾರ್ ನೇತೃತ್ವದ ಕುಖ್ಯಾತ ಗ್ಯಾಂಗ್ ಬೀದರ್ ನಲ್ಲಿ ದರೋಡೆ ನಡೆಸಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಶಂಕಿತ ಮಾಸ್ಟರ್‌ಮೈಂಡ್ ಅಮಿತ್ ಕುಮಾರ್ ಈಗಾಗಲೇ ಬಿಹಾರದಲ್ಲಿ ಹಲವಾರು ಉನ್ನತ ಮಟ್ಟದ ದರೋಡೆ ಮತ್ತು ಕಳ್ಳತನ ಪ್ರಕರಣಗಳಿಗೆ ಬೇಕಾಗಿರುವ ಅಪರಾಧಿಯಾಗಿದ್ದಾನೆ. ಗ್ಯಾಂಗ್ ಸರಣಿ ದರೋಡೆಗೆ ಪ್ಲ್ಯಾನ್ ಮಾಡಿತ್ತಾ ಹಾಗೂ ಅವರಿಗೆ ತಪ್ಪಿಸಿಕೊಳ್ಳಲು ಸ್ಥಳೀಯರು ಯಾರಾದರೂ ಸಹಾಯ ಮಾಡಿದ್ರಾ ಎನ್ನುವುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಿಸಿಎಸ್, ಟಾಸ್ಕ್ ಫೋರ್ಸ್ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಶೋಧ ಮುಂದುವರೆಸಿದ್ದಾರೆ. ಬಿಹಾರ ಪೊಲೀಸರನ್ನು ಸಂಪರ್ಕಿಸಿದ ನಂತರ ನಗರ ಪೊಲೀಸ್‌ನ ಉನ್ನತ ಅಧಿಕಾರಿಗಳು ಈಗಾಗಲೇ ಅಮಿತ್ ಕುಮಾರ್ ಅವರ ಅಪರಾಧದ ದಾಖಲೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಪ್ರಕರಣದ ತನಿಖೆಯ ಭಾಗವಾಗಿರುವ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಈ ಗ್ಯಾಂಗ್ ಅನೇಕ ರಾಜ್ಯಗಳಲ್ಲಿ ದರೋಡೆ ಮಾಡಿರುವ ಇತಿಹಾಸ ಹೊಂದಿದೆ. ಆದ್ದರಿಂದ ಅವರ ನಿಖರವಾದ ಮಾರ್ಗವನ್ನು ಪತ್ತೆಹಚ್ಚುವುದು ಒಂದು ಸವಾಲಾಗಿದೆ. ಆದರೂ ಅವರನ್ನು ಸೆರೆ ಹಿಡಿಯಲು ನಾವು ಸುಧಾರಿತ ತಂತ್ರಜ್ಞಾನ ಮತ್ತು ಇತರ ರಾಜ್ಯಗಳ ಪೊಲೀಸ್ ತಂಡಗಳೊAದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಸದ್ಯ ಶೂಟಿಂಗ್ ಗ್ಯಾಂಗ್ ಬಿಹಾರಕ್ಕೆ ಪರಾರಿಯಾಗಿದೆಯೇ? ಅಥವಾ ಬೇರೆ ಕಡೆ ಹೋಗಿ ತಲೆಮರೆಸಿಕೊಂಡಿದೆಯೇ? ಎಂಬ ಬಗ್ಗೆ ಪೊಲೀಸ್ ತನಿಖೆ ಮೂಲಕವೇ ತಿಳಿದುಬರಬೇಕಿದೆ.