ಸಿಎಂ ಮುಂದೆ ಶರಣಾದ ನಕ್ಸಲರು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಶಿಫ್ಟ್: 14 ದಿನಗಳವರೆಗೆ ಪೊಲೀಸ್ ಕಸ್ಟಡಿ: ಇಂದಿನಿಂದ ವಿಚಾರಣೆ ಆರಂಭ

ಚಿಕ್ಕಮಗಳೂರು: ಇತ್ತೀಚೆಗೆ 6 ಜನ ನಕ್ಸಲರು ಸಿಎಂ ಕಚೇರಿಯಲ್ಲಿ ಶರಣಾಗಿದ್ದು ಈ ಆರು ಜನರನ್ನು ಜಿಲ್ಲಾ ಪೊಲೀಸರು ವಿಚಾರಣೆ ಹಾಗೂ ಸ್ಥಳ ಪರಿಶೀಲನೆಗೆ ಚಿಕ್ಕಮಗಳೂರಿಗೆ ಕರೆತಂದಿದ್ದಾರೆ.

ಎನ್‌ಐಎ ಕೋರ್ಟಿನಿಂದ ವಿಚಾರಣೆಗಾಗಿ ಅನುಮತಿ ಪಡೆದಿರುವ ಪೊಲೀಸರು, ಶರಣಾದ ನಕ್ಸಲರನ್ನು ಜಿಲ್ಲೆಗೆ ಕರೆದುಕೊಂಡು ಬಂದಿದ್ದು, 14 ದಿನಗಳವರೆಗೆ ಅವರು ಪೊಲೀಸ್ ಕಸ್ಟಡಿಯಲ್ಲಿ ಇರಲಿದ್ದಾರೆ.

ಮುಂಡಗಾರು ಲತಾ, ಜಯಣ್ಣ, ಸುಂದರಿ, ವನಜಾಕ್ಷಿ, ವಸಂತ್ ಹಾಗೂ ಜೀಶ ಅವರನ್ನು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಕರೆತರಲಾಗಿದೆ. ಮುಂಡಗಾರು ಲತಾ 33, ವನಜಾಕ್ಷಿ 15, ಸುಂದರಿ-ಜಯಣ್ಣ ಮೇಲೆ ತಲಾ 3 ಕೇಸ್ ದಾಖಲಾಗಿದ್ದವು. ವಸಂತ್ ಹಾಗೂ ಜೀಶ ಮೇಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಕರಣಗಳಿಲ್ಲ.

ಶೃಂಗೇರಿ, ಜಯಪುರ, ಕೊಪ್ಪ ಠಾಣೆಯಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇಂದಿನಿಂದ ಪ್ರಕರಣಗಳ ಬಗ್ಗೆ ವಿಚಾರಣೆ ಆರಂಭವಾಗಲಿದೆ. ಈಗಾಗಲೇ ಪೊಲೀಸರು, ನಕ್ಸಲರ ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಆರು ಜನ ನಕ್ಸಲರ ವಿಚಾರಣೆ ನೇತೃತ್ವವನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಡಿವೈಎಸ್‌ಪಿ ಹಾಗೂ ಉಡುಪಿ ಜಿಲ್ಲೆಯ ಡಿವೈಎಸ್‌ಪಿ ಅವರು ನಿರ್ವಹಿಸಲಿದ್ದಾರೆ.

error: Content is protected !!