ಬೆಂಗಳೂರು: ಸಾರಿಗೆ ಇಲಾಖೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಿದ ಬೆನ್ನಲ್ಲೆ ಹೊಸ ಕಾರು, ಬೈಕ್ ಖರೀದಿ ಮಾಡುವವರಿಗೆ ರಾಜ್ಯ ಸರ್ಕಾರ ಶಾಕ್ ನೀಡಲು ಮುಂದಾಗಿದೆ.
ಫೆಬ್ರವರಿಯಿಂದ ಹೊಸ ಕಾರು, ಬೈಕ್ ಖರೀದಿಯ ನೋಂದಣಿ ಶುಲ್ಕ (ರಿಜಿಸ್ಟ್ರೇಷನ್) ತಲಾ 1000 ರೂ. ಹಾಗೂ 500 ರೂ. ಹೆಚ್ಚಳ ಮಾಡಲು ನಿರ್ಧರಿಸಿದೆ. ಈಗಾಗಲೇ ಬೆಳಗಾವಿಯ ಅಧಿವೇಶನದಲ್ಲಿ ರಿಜಿಸ್ಟ್ರೇಷನ್ ಶುಲ್ಕ ಹೆಚ್ಚಳದ ಮಸೂದೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಆದರೆ ಇದಕ್ಕೆ ವಾಹನ ಮಾಲೀಕರು ಮಾತ್ರ ಗರಂ ಆಗಿದ್ದಾರೆ.
ದರ ಹೆಚ್ಚಳ ಮಾಡಿ ಆ ಹಣವನ್ನು ಚಾಲಕರ ಅಭಿವೃದ್ಧಿಗೆ ಬಳಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ನಮ್ಮಿಂದ ಕಿತ್ತು ಅವರಿಗೆ ನೀಡುವುದು ಸರಿಯಲ್ಲ. ಸರ್ಕಾರವೇ ಅವರ ಕಲ್ಯಾಣಕ್ಕೆ ಹಣ ನೀಡಲಿ ಎಂದಿದ್ದಾರೆ.
ದರ ಹೆಚ್ಚಳ ಸಂಬಂಧ ಈಗಾಗಲೇ ಗೆಜೆಟ್ ನೋಟಿಫಿಕೇಷನ್ ಆಗಿದ್ದು, ಸದ್ಯ ವಾಹನ್ – 4 ನಲ್ಲಿ ಅಪ್‌ಡೇಟ್ ಮಾಡಲಾಗುತ್ತಿದೆ. ಸಾರಿಗೆ ಇಲಾಖೆ ಸದ್ಯದಲ್ಲೇ ಅಂತಿಮ ಆದೇಶ ಹೊರಡಿಸಲಿದೆ. ಆದೇಶ ಹೊರಡಿಸಿದ ಬೆನ್ನಲ್ಲೇ, ರಾಜ್ಯದ ಎಲ್ಲಾ ಆರ್‌ಟಿಒಗಳಲ್ಲೂ ನೂತನ ರಿಜಿಸ್ಟ್ರೇಷನ್ ದರ ಜಾರಿ ಆಗಲಿದೆ. ಸಾರ್ವಜನಿಕ ವಲಯದಲ್ಲಿ ಮಾತ್ರ ಭಾರೀ ಆಕ್ರೋಶ ವ್ಯಕ್ತವಾಗಿದೆ.