ನಟ ಸೈಫ್ ಅಲಿ ಖಾನ್ ಪ್ರಕರಣಕ್ಕೆ ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂಟ್ರಿ..!: ಬಾಂದ್ರಾದ ಅಪಾರ್ಟ್ಮೆಂಟ್‌ಗೆ ಭೇಟಿ: ಭೂಗತ ಪಾತಕಿಗಳಿಗೆ ದುಸ್ವಪ್ನವಾಗಿ ಕಾಡುವ ‘ಎನ್‌ಕೌಂಟರ್ ದಯಾನಾಯಕ್’

ಸೈಫ್ ಅಲಿ ಖಾನ್ ಚಾಕು ಇರಿತ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಈಗಾಗಲೇ ಪ್ರಕರಣದ ತನಿಖೆಗೆ ಏಳು ತಂಡಗಳನ್ನು ರಚಿಸಲಾಗಿದೆ. ಇದೆಲ್ಲದರ ನಡುವೆ ಪ್ರಕರಣದಲ್ಲಿ ಒಂದು ಪ್ರಮುಖ ಬೆಳವಣಿಗೆ ಆಗಿದ್ದು, ಪವರ್‌ಫುಲ್ ಕಾಪ್ ಒಬ್ಬರು ಪ್ರಕರಣದ ತನಿಖೆಗೆ ಎಂಟ್ರಿ ಕೊಟ್ಟಿದ್ದಾರೆ.

ವಿಶ್ವಮಟ್ಟದಲ್ಲಿ ಸುದ್ದಿಯಾದ ಈ ಘಟನೆಯ ತನಿಖೆಗೆ ಹಲವು ಪೊಲೀಸ್ ಅಧಿಕಾರಿಗಳು ಬಾಂದ್ರಾದ ಅಪಾರ್ಟ್ಮೆಂಟ್‌ಗೆ ಭೇಟಿ ನೀಡಿದ್ದರು. ಈ ವೇಳೆ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಸಹ ಆಗಮಿಸಿದ್ದರು. ಸೈಪ್ ಅಲಿ ಖಾನ್ ಪ್ರಕರಣದ ತನಿಖೆಗೆ ಮಾಡಲಾಗಿರುವ ಏಳು ತಂಡಗಳಲ್ಲಿ ಒಂದು ತಂಡದ ಜವಾಬ್ದಾರಿ ಎನ್‌ಕೌಂಟರ್ ದಯಾನಾಯಕ್ ಅವರು ವಹಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಎನ್‌ಕೌಂಟರ್ ದಯಾನಾಯಕ್ ಅವರು ಇಂದು (ಜನವರಿ 17) ಸೈಫ್ ಅಲಿ ಖಾನ್ ಅನ್ನು ದಾಖಲು ಮಾಡಿರುವ ಲೀಲಾವತಿ ಆಸ್ಪತ್ರೆ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ.

ಎನ್‌ಕೌಂಟರ್ ದಯಾನಾಯಕ್ ಮೂಲತಃ ಉಡುಪಿಯವರು

ಹೌದು, ಮುಂಬೈ ಭೂಗತ ಲೋಕವನ್ನು ಯಮನಂತೆ ಕಾಡುತ್ತಿರುವ ಎನ್‌ಕೌಂಟರ್ ದಯಾನಾಯಕ್ ಅವರು ಉಡುಪಿ ಜಿಲ್ಲೆಯವರು. ಕಠಿಣ ಪೊಲೀಸ್ ಅಧಿಕಾರಿಯಾಗಿ ಹೆಸರು ಮಾಡಿದವರು. ಸಣ್ಣ ವಯಸ್ಸಿನಲ್ಲೇ ಮುಂಬೈಗೆ ಹೋಗಿ ಅಲ್ಲಿ ಕೆಲಸ ಮಾಡಲು ಆರಂಭಿಸಿದರು. ಒಮ್ಮೆ ಪೊಲೀಸ್ ಠಾಣೆಯಲ್ಲಿಪ್ಲಂಬಿಂಗ್ ಕೆಲಸ ಮಾಡುವಾಗ ಅವರಿಂದ ಸ್ಪೂರ್ತಿ ಪಡೆದು ಪೊಲೀಸ್ ಅಧಿಕಾರಿ ಆಗುವ ನಿರ್ಣಯ ಮಾಡಿದರು. ಮುಂದೆ ಚೆನ್ನಾಗಿ ಓದಿ, ಇನ್‌ಸ್ಪೆಕ್ಟರ್ ಆದ ದಯಾನಾಯಕ್, ಆ ನಂತರ ಭೂಗತ ಪಾತಕಿಗಳಿಗೆ ದುಸ್ವಪ್ನವಾಗಿ ಕಾಡಲು ಆರಂಭಿಸಿದರು.
ಚೋಟಾ ರಾಜನ್, ಚೋಟಾ ಶಕೀಲ್ ಇನ್ನಿತರೆ ಕೆಲವು ಪಾತಕಿಗಳ ಕಡೆಯವರನ್ನು ಸಿಕ್ಕ-ಸಿಕ್ಕಲ್ಲಿ ಕೊಂದು ಸುದ್ದಿಯಾದರು. ಆದರೆ ಅವರ ವಿರುದ್ಧವೂ ಕೆಲ ಪ್ರಕರಣಗಳು ಜಾರಿಯಲ್ಲಿದ್ದು, ಒಮ್ಮೆ ಬಂಧನಕ್ಕೂ ಒಳಗಾಗಿದ್ದರು. ಆದರೆ ಪ್ರಕರಣ ಖುಲಾಸೆಯಾಗಿ ಮತ್ತೆ ಪೊಲೀಸ್ ಇಲಾಖೆ ಸೇರಿದ್ದಾರೆ. ಈಗ ಕಮೀಷನರ್ ಆಗಿರುವ ದಯಾನಾಯಕ್, ಸೈಫ್ ಅಲಿ ಖಾನ್ ಪ್ರಕರಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ನಟನಿಗೆ ಚೂರಿ ಇರಿದ ಪ್ರಕರಣದಲ್ಲಿ ಹಲವು ಪ್ರಶ್ನೆಗಳು ಎದ್ದಿದ್ದು, ಸೈಫ್ ಅಲಿ ಖಾನ್‌ಗೆ ಚಾಕು ಚುಚ್ಚಿದವನ ಉದ್ದೇಶ ಏನಿತ್ತು? ಘಟನೆ ನಡೆದಿದ್ದು ಹೇಗೆ? ಘಟನೆ ನಡೆದ ಬಳಿಕ ಆತ ಮನೆಯಲ್ಲೇ ಅಡಗಿ ಕೂತಿದ್ದು ಹೇಗೆ? ಚಾಕು ಇರಿದವನ ಹಿಂದೆ ಯಾವುದಾದರೂ ತಂಡ ಇದೆಯೇ? ಇನ್ನಿತರೆ ಪ್ರಶ್ನೆಗಳಿಗೂ ಈಗಲೂ ಉತ್ತರ ಬೇಕಿದೆ. ಎಲ್ಲಕ್ಕಿಂತಲೂ ಮುಖ್ಯವಾದ ಆರೋಪಿಯ ಬಂಧನ ಆಗಬೇಕಿದೆ.

error: Content is protected !!