ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತಕ್ಕೆ ಟ್ವಿಸ್ಟ್:ಹಿಟ್ ಅಂಡ್ ರನ್ ಕೇಸ್ ದಾಖಲು: ಮುಂದುವರಿದ ತನಿಖೆ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರಿನ ಅಪಘಾತವನ್ನು ಹಿಟ್ ಅಂಡ್ ರನ್ ಎಂದು ಪರಿಗಣಿಸಲಾಗಿದೆ.

ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕಾರಿನ ಚಾಲಕ ಶಿವಪ್ರಸಾದ ಗಂಗಾಧರಯ್ಯ ಅವರು ನೀಡಿದ ದೂರಿನ ಮೇರೆಗೆ ಹಿಟ್ ಅಂಡ್ ರನ್ ಕೇಸ್ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ಚಾಲಕ ನೀಡಿದ ದೂರಿನ ಪ್ರಕಾರ ಘಟನೆಯ ಸಂದರ್ಭ ಕಾರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗನ್ ಮ್ಯಾನ್ ಈರಪ್ಪ ಹುಣಶಿಕಟ್ಟಿ ಮತ್ತು ಚಾಲಕ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು. ಬೆಳಗ್ಗೆ 5 ಗಂಟೆಗೆ ಅಂಬಡಗಟ್ಟಿ ಕ್ರಾಸ್ ಬಳಿ ಒಂದು ಕಂಟೇನರ್ ಟ್ರಕ್ ಬಲಗಡೆಯಿಂದ ಎಡಗಡೆಗೆ ಬಂತು. ಈ ವೇಳೆ ಇವರ ಕಾರಿನ ಬಲಭಾಗಕ್ಕೆ ತಾಗಿದೆ. ಅದರಿಂದ ಮುಂದೆ ಆಗಲಿದ್ದ ಹೆಚ್ಚಿನ ಅನಾಹುತ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ, ಸರ್ವೀಸ್ ರಸ್ತೆಗಿಳಿದು ಕಾರು ಮರಕ್ಕೆ ಗುದ್ದಿದೆ ಎಂದು ಉಲ್ಲೇಖಿಸಲಾಗಿದೆ.

ವಾಹನವನ್ನು ಪಂಚನಾಮೆ ನಡೆಸಲು ಪೊಲೀಸರು ಸ್ಥಳಕ್ಕೆ ತೆರಳಿದಾಗ ಅಲ್ಲಿ ಕಾರು ಇರಲಿಲ್ಲ. ಸಚಿವರ ಕಡೆಯವರು ಆ ಕಾರನ್ನು ಟೊಯೋಟಾ ಶೋರೂಂಗೆ ಸಾಗಿಸಿದ್ದರು. ಅಲ್ಲಿಯೇ ಹೋಗಿ ನಮ್ಮ ಪೊಲೀಸರು ಪಂಚನಾಮೆ ಮಾಡಿದ್ದಾರೆ. ಇನ್ನು ಕಾರಿನ ಬಲಬದಿಗೆ ಗುದ್ದಿರುವ ನಿಶಾನೆಗಳು ಸಿಕ್ಕಿವೆ. ಕಾರಿಗೆ ತಾಗಿದ ಕ್ಯಾಂಟರ್‌ಗೆ ಶೋಧಕಾರ್ಯ ಮುಂದುವರಿಸಿದ್ದೇವೆ. ಅಪಘಾತ ನಡೆದ ಸಮಯದಲ್ಲಿ ಸುಮಾರು 42 ಕ್ಯಾಂಟರ್‌ಗಳು ಟೋಲ್‌ಗೇಟ್ ದಾಟಿವೆ. ಅವುಗಳನ್ನೂ ಪರಿಶೀಲಿಸಲಾಗುತ್ತಿದ್ದು, ಈಗಾಗಲೇ 2 ತಂಡಗಳನ್ನು ರಚಿಸಲಾಗಿದೆ ಎಂದಿದ್ದಾರೆ.

ದೂರಿನಲ್ಲಿ ಯಾವುದೇ ರಾಜಕೀಯ ವೈಷಮ್ಯಗಳ ಉಲ್ಲೇಖವಿಲ್ಲ ಎಮದಿರುವ ಅವರು, ಎಲ್ಲ ಆಯಾಮಗಳಿಂದ ತನಿಖೆಯನ್ನು ನಡೆಸಲಾಗುವುದು. ಸ್ಥಳ ಪರಿಶೀಲಿಸಿದಾಗ ಅಲ್ಲಿ ಯಾವುದೇ ಪೂರ್ವ ನಿಯೋಜನೆ ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

error: Content is protected !!