ಎರಡು ಕಾರುಗಳಿಗೆ ಒಂದೇ ನಂಬರ್ ಪ್ಲೇಟ್..!: ಅಪರಿಚಿತ ಕಾರು ಮಾಲೀಕನ ವಿರುದ್ಧ ಎಫ್‌ಐಆರ್

ಬೆಂಗಳೂರು: ಎರಡು ಕಾರುಗಳಿಗೆ ಒಂದೇ ನಂಬರ್ ಪ್ಲೇಟ್ ಅಳವಡಿಕೆ ಕಂಡು ಬಂದಿದ್ದು, ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡ ಅಪರಿಚಿತ ಕಾರಿನ ಮಾಲೀಕನ ವಿರುದ್ಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಜ.10ರಂದು ಕರ್ತವ್ಯ ನಿರ್ವಹಿಸುತ್ತಿದ್ದ ಶಿವರಾಜ್ ಅವರಿಗೆ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿದ್ದ ಕಾರನ್ನ ತೆರವುಗೊಳಿಸುವಂತೆ ದೂರು ಬಂದಿತ್ತು. ಸ್ಥಳಕ್ಕೆ ಹೋಗಿ ನಂಬರ್ ಪ್ಲೇಟ್ ನಮೂದಿಸಿಕೊಂಡು ಕಾರಿನ ಮಾಲೀಕ ಜಾನ್ ಮಾರ್ಟಿನ್ ಎಂಬುವರ ಮೊಬೈಲ್ ನಂಬರ್‌ಗೆ ಕರೆ ಮಾಡಿ, ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಕಾರನ್ನ ತೆರವುಗೊಳಿಸುವಂತೆ ಸೂಚಿಸಿದ್ದರು. ಈ ವೇಳೆ ತಮ್ಮ ಕಾರನ್ನ ವಿವೇಕನಗರದ ಎನ್‌ಜಿವಿ ಬಳಿ ನಿಲ್ಲಿಸುವುದಾಗಿ ಜಾನ್ ಹೇಳಿದ್ದರು.

ಜಾನ್ ಅವರ ದಾಖಲಾತಿಗಳನ್ನ ಪೊಲೀಸರು ಪರಿಶೀಲಿಸಿದಾಗ, ನಕಲಿ ನಂಬರ್ ಅನ್ನು ಯಾರೋ ಬೇರೆ ವ್ಯಕ್ತಿ ಅಳವಡಿಸಿಕೊಂಡಿರುವುದು ಗೊತ್ತಾಗಿದೆ. ಜಾನ್ ಅವರ ಕಾರು ಬೂದು ಬಣ್ಣದ್ದಾಗಿದೆ. ಆದರೆ ಅಪರಿಚಿತ ಕಾರು ಬಿಳಿ ಬಣ್ಣದ್ದಾಗಿದ್ದು, ಜಾನ್ ಅವರ ಕಾರಿನ ನಂಬರ್ ಅನ್ನೇ ಅಳವಡಿಸಲಾಗಿದೆ.

ನಕಲಿ ಕಾರಿನ ಮಾಲೀಕನ ಬರುವಿಕೆಗೆ ಕಾದರೂ ಬರದ ಕಾರಣ ಅನುಮಾನಗೊಂಡು ಕಾರನ್ನ ಸಂಚಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

error: Content is protected !!