ಸಾಂದರ್ಭಿಕ ಚಿತ್ರ
ಶೀಲ ಶಂಕಿಸಿ 6 ತಿಂಗಳ ಗರ್ಭಿಣಿಯನ್ನು ಪತಿ ನೇಣು ಬಿಗಿದು ಕೊಲೆ ಮಾಡಿ, ಬಳಿಕ ದೇಹವನ್ನು ಸುಟ್ಟು ಹಾಕಿರುವ ಘಟನೆ ಜಮ್ಮು- ಕಾಶ್ಮೀರದಲ್ಲಿ ನಡೆದಿದೆ.
ಆರೋಪಿ ಇಮ್ರಾನ್ ಖಾನ್ ದಿನಗೂಲಿ ಕಾರ್ಮಿಕನಾಗಿದ್ದು, ಎರಡನೇ ಪತ್ನಿಯಾದ ಶಬ್ನಮ್ ಅಖ್ತರ್ ಗೆ ಗ್ರಾಮದ ಬೇರೊಬ್ಬ ವ್ಯಕ್ತಿ ಜೊತೆ ಅಕ್ರಮ ಸಂಬಂಧ ಇದೆ ಎಂದು ಅನುಮಾನಿಸುತ್ತಿದ್ದ. ಇದೇ ಕಾರಣಕ್ಕೆ ಹಲವು ಬಾರಿ ಕಿತ್ತಾಟವೂ ನಡೆದಿತ್ತು. ಹಲವು ಬಾರಿ ರಾಜೀ ಪಂಚಾಯಿತಿ ನಡೆಸಲಾಗಿತ್ತು. ಆದರೂ, ಸಂಬಂಧ ಹಳಿಗೆ ಬಂದಿರಲಿಲ್ಲ ಎಂದು ವರದಿಯಾಗಿದೆ. ಬಳಿಕ 2024ರ ಅಕ್ಟೋಬರ್ 4 ರಂದು ರಾತ್ರಿ ತೀವ್ರ ಜಗಳವಾಡಿ ಆಕೆಯನ್ನು ನೇಣು ಬಿಗಿದು ಕೊಲೆ ಮಾಡಿದ್ದಾನೆ. ನಂತರ ಮನೆಯ ಹಿಂಭಾಗದಲ್ಲಿ ಹೂತು ಹಾಕಿದ್ದಾನೆ.
ಕೆಲ ದಿನಗಳ ನಂತರ ದುರ್ವಾಸನೆ ಬರುತ್ತಿದ್ದರಿಂದ ಗುಂಡಿಯಿಂದ ಶವವನ್ನು ತೆಗೆದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ. ಯಾವುದೇ ಸಾಕ್ಷ್ಯ ಸಿಗದಂತೆ ಸುಟ್ಟ ದೇಹದಲ್ಲಿ ಉಳಿದ ಮೂಳೆಗಳನ್ನು ಆತನ ತಾಯಿ ಕಲ್ಲಿನಿಂದ ಜಜ್ಜಿ ಪುಡಿ ಮಾಡಿ ಅದನ್ನು ಮಣ್ಣಿನಲ್ಲಿ ಬೆರೆಸಿದ್ದಾರೆ.
ಕೊಲೆಯ ಬಳಿಕ ತನ್ನ ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ಆರೋಪಿ ಇಮ್ರಾನ್ ತಾನೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ತೆ ಆರಂಭಿಸಿದಾಗ, ಮೃತ ಶಬ್ನಮ್ ಅವರ ಮೊಬೈಲ್ ಫೋನ್ ಇನ್ನೂ ಚಾಲ್ತಿಯಲ್ಲಿರುವುದು ಗೊತ್ತಾಗಿದೆ. ಅದರ ಜಾಡು ಹಿಡಿದಾಗ, ಕುಟುಂಬಸ್ಥರನ್ನು ವಿಚಾರಣೆ ನಡೆಸಿದಾಗ, ಆರೋಪಿಯ ಮೊದಲ ಪತ್ನಿ ಘಟನೆಗೆ ಸಾಕ್ಷಿ ನುಡಿದಿದ್ದಾಳೆ.
ಆಕೆಯನ್ನು ಕೊಂದಾಗ ತಾನು ಮನೆಯಲ್ಲಿದ್ದೆ. ಹೆದರಿ ಈ ಬಗ್ಗೆ ಎಲ್ಲೂ ಬಾಯ್ಬಿಟ್ಟಿರಲಿಲ್ಲ ಎಂದು ಹೇಳಿದ್ದಾರೆ. ಘಟನಾ ಸ್ಥಳ ಪರಿಶೀಲಿಸಿದಾಗ ಮೂಳೆ ತುಂಡುಗಳು, ಮೃತರ ಕೂದಲು, ಕೆಲವು ಇದ್ದಿಲು ತುಂಡುಗಳು, ಮೃತರ ಮೊಬೈಲ್ ಫೋನ್ ಮತ್ತು ದನದ ಕೊಟ್ಟಿಗೆಗೆ ಬೆಂಕಿ ಹತ್ತಿಕೊಳ್ಳದಂತೆ ಬಳಸಿದ ಒಂದು ಟಿನ್ ಶೀಟ್ ಸೇರಿದಂತೆ ಹಲವು ಮಹತ್ವದ ಪುರಾವೆಗಳು ಪೊಲೀಸರಿಗೆ ಸಿಕ್ಕಿವೆ.