ಮದ್ಯಕ್ಕೆ ಅಮಲು ಪದಾರ್ಥ ಬೆರೆಸಿ ಯುವತಿ ಮೇಲೆ ಅತ್ಯಾಚಾರ: ಪ್ರಕರಣದ ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ

ಮಂಗಳೂರು: ಪಾರ್ಟಿಗೆ ಬಂದಿದ್ದ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ ಹಂಪನಕಟ್ಟೆ ಲೈಟ್‌ಹೌಸ್ ಹಿಲ್ ರೋಡ್ ನಿವಾಸಿ ಬ್ರಯಾನ್ ರಿಚರ್ಡ್ ಅಮನ್ನಾ (34) ಎಂಬಾತನಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ.

ಯುವತಿಗೆ ನೌಕಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಜಾಯ್‌ಲಿನ್ ಗ್ಲಾನೆಲ್ ಪಿಂಟೋ ಎಂಬವರ ಪರಿಚಯವಾಗಿ ಸ್ನೇಹಿತರಾಗಿದ್ದು, ಅವರಿಗೆ ಅಂಡಮಾನ್ ವರ್ಗಾವಣೆ ಆದ ಹಿನ್ನೆಲೆಯಲ್ಲಿ 2021ರ ಫೆ. 5ರಂದು ಸ್ನೇಹಿತರು ಸೇರಿ ಪುತ್ತೂರಿನಲ್ಲಿ ಪಾರ್ಟಿ ಆಯೋಜಿಸಿದ್ದರು. ಪುತ್ತೂರು ತಾಲೂಕಿನ ಕೊಡಿಪ್ಪ್ಪಾಡಿ ಗ್ರಾಮದ ಕೊಡಿಕಾಡು ಎಂಬಲ್ಲಿರುವ ಆಕಾಶ್ ಕೆ.ಎಸ್. ಎಂಬವರಿಗೆ ಸೇರಿದ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಯುವತಿಯೂ ಭಾಗವಹಿಸಿದ್ದು, ಸ್ನೇಹಿತ ನಿಕೇತ್ ಶೆಟ್ಟಿ ಎಂಬವರ ಜತೆ ಕಾರಿನಲ್ಲಿ ಅಲ್ಲಿಗೆ ತೆರಳಿದ್ದರು. ಪಾರ್ಟಿಗೆ ಕ್ಯಾಟರಿಂಗ್ ವ್ಯವಸ್ಥೆ ಮಾಡಿದ್ದ ಬ್ರಯಾನ್ ಅಮನ್ನಾ ಯುವತಿಗೆ ತನ್ನನ್ನು ತಾನು ಜಾಯಿಲಿನ್‌ನ ಸ್ನೇಹಿತ ಎಂದು ಪರಿಚಯಿಸಿಕೊಂಡು, ಬಳಿಕ ಆಕೆಗೆ ವೈನ್‌ಗೆ ಮತ್ತು ಬರಿಸುವ ಅಮಲು ಪದಾರ್ಥವನ್ನು ಮಿಶ್ರ ಮಾಡಿ ಒತ್ತಾಯದಿಂದ ನೀಡಿದ್ದ.

ಜಾಯಿಲಿನ್ ಮತ್ತು ಅವರ ಸ್ನೇಹಿತ ರೆಬೆಕಾ ಅವರು ಯುವತಿಗೆ ರಾತ್ರಿ ಉಳಿದುಕೊಳ್ಳಲು ಕೊಠಡಿ ತೋರಿಸಿದ್ದು, ಮೂವರೂ ಅಲ್ಲಿ ಸ್ವಲ್ಪ ಹೊತ್ತು ಮಾತನಾಡಿಕೊಂಡಿದ್ದರು. ಬಳಿಕ ಯುವತಿ ನಿದ್ದೆಗೆ ಜಾರಿದ್ದು ಮುಂಜಾನೆ 2 ಗಂಟೆ ವೇಳೆಗೆ ಎಚ್ಚರವಾಗಿ ನೋಡಿದಾಗ ಜಾಯಿಲಿನ್ ಮತ್ತು ರೆಬೆಕಾ ಕೊಠಡಿಯಲ್ಲಿ ಇರಲಿಲ್ಲ. ಮತ್ತೆ ನಿದ್ದೆಗೆ ಜಾರಿದ ಯುವತಿಗೆ 5 ಗಂಟೆ ವೇಳೆ ಎಚ್ಚರವಾಗಿದ್ದು, ಆಗ ಆಕೆಯ ಮೇಲೆ ಬ್ರಯಾನ್ ಅಮನ್ನಾ ಅತ್ಯಾಚಾರ ನಡೆಸಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ.

ಆತನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣೆಯ ಆಗಿನ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ ಅವರು ತನಿಖೆ ಪೂರ್ಣಗೊಳಿಸಿ ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್.ವಿ. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ 376ರಡಿ 10 ವರ್ಷ ಕಠಿನ ಕಾರಾಗೃಹವಾಸ ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ಕಲಂ 328ರಡಿ 5 ವರ್ಷ ಕಾರಾಗೃಹವಾಸದ ಶಿಕ್ಷಕೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ನೊಂದ ಯುವತಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.

error: Content is protected !!