ತ್ರಿಶೂರ್: ಅಮೃತ ಘಳಿಗೆ ಸಿನಿಮಾದ ‘ಹಿಂದೂಸ್ಥಾನವು ಎಂದೂ ಮರೆಯದ’ ಹಾಡಿನ ಗಾಯಕ, ‘ಭಾವ ಗಾಯಕ’ರೆಂದೇ ಖ್ಯಾತಿ ಪಡೆದಿದ್ದ ಗಾಯಕ ಪಿ.ಜಯಚಂದ್ರನ್ ನಿನ್ನೆ ನಿಧನರಾಗಿದ್ದಾರೆ.
ಗುರುವಾರ ತಮ್ಮ ನಿವಾಸದಲ್ಲಿ ಕುಸಿದು ಬಿದ್ದ ಜಯಚಂದ್ರನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.
ನಿನ್ನೆ ಸಂಜೆ ಸುಮಾರು 7.55ಕ್ಕೆ ನಿಧನ ಹೊಂದಿದರು ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ. ಮೃತರು ಪತ್ನಿ ಲಲಿತಾ, ಮಗಳು ಲಕ್ಷ್ಮೀ ಮತ್ತು ಮಗ ಗಾಯಕ ದೀನನಾಥನ್ ಅವರನ್ನು ಅಗಲಿದ್ದಾರೆ.
ಕನ್ನಡ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ 16 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ಸುಪ್ರಸಿದ್ಧ ಹಿರಿಯ ಹಿನ್ನೆಲೆ ಗಾಯಕ ಇವರು. ಪ್ರೀತಿ, ಭಕ್ತಿಯ ಭಾವನೆಗಳನ್ನು ತುಂಬಿ ಅತ್ಯಂತ ಸೊಗಸಾಗಿ ಹಾಡುತ್ತಿದ್ದರು. ಮಂದಾರ ಪುಷ್ಪವು ನೀನು (ರಂಗನಾಯಕಿ), ಕನ್ನಡ ನಾಡಿನ ಕರಾವಳಿ (ಮಸಣದ ಹೂವು), ಕಾಲ್ಗೆಜ್ಜೆ ತಾಳಕ್ಕೆ (ಮುನಿಯನ ಮಾದರಿ), ಚಂದ ಚಂದ (ಮಾನಸ ಸರೋವರ), ಪ್ರೇಮದ ಶ್ರುತಿ ಮೀಟಿದೆ (ಗಣೇಶನ ಮದುವೆ), ಜೀವನ ಸಂಜೀವನ (ಹಂತಕನ ಸಂಚು) ಮುಂತಾದ ಕನ್ನಡ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ.