ಕೊರೆಯುವ ಚಳಿಯಲ್ಲೂ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಮುಷ್ಕರ: ಎರಡನೇ ದಿನಕ್ಕೆ ಮುಂದುವರಿದ ಪ್ರತಿಭಟನೆ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ

ಬೆಂಗಳೂರು: ಕೊರೆಯುವ ಚಳಿಯಲ್ಲೂ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಮುಷ್ಕರ ಮುಂದುವರಿದೆ.

ಕನಿಷ್ಠ ಮಾಸಿಕ ಗೌರವಧನ 15 ಸಾವಿರ ರೂ. ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಕೈಗೊಂಡಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಎಐಯುಟಿಯುಸಿ ನೇತೃತ್ವದಲ್ಲಿ ಸ್ವಾತಂತ್ರ‍್ಯ ಉದ್ಯಾನದಲ್ಲಿ ರಾತ್ರಿ ಕೊರೆಯುವ ಚಳಿಯ ನಡುವೆಯೂ ಸಾವಿರಾರು ಆಶಾಕಾರ್ಯಕರ್ತೆಯರು ತಮ್ಮ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದು, ನಿನ್ನೆ ಲೋಕಾಯುಕ್ತ ನಿವೃತ್ತ ನ್ಯಾ| ಎನ್. ಸಂತೋಷ್ ಹೆಗ್ಡೆ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿ, ನೈತಿಕ ಬಲ ತುಂಬಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, “ದುಡಿಯುವ ಯಾವುದೇ ವ್ಯಕ್ತಿಯಾದರೂ ತನ್ನ ಜೀವನಕ್ಕೆ ಬೇಕಾದ ಕನಿಷ್ಠ ಮೌಲ್ಯ ಪಡೆಯುವುದು ಸಂವಿಧಾನ ಬದ್ಧವಾದ ಮಾನವ ಹಕ್ಕು. ಅದು ವೇತನ, ಗೌರವಧನ ಅಥವಾ ಇನ್ನಾವುದೇ ರೂಪದಲ್ಲಿರಬಹುದು ಅದನ್ನು ನೀಡಬೇಕಿರುವುದು ಸರಕಾರದ ಕರ್ತವ್ಯ” ಎಂದರು.

ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. “ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಗೌರವಧನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು. ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿ ಮುಂದಿನ ಬಜೆಟ್‌ನಲ್ಲಿ ಗೌರವಧನ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯೆ ನೀಡಿ, “ಆಶಾ ಕಾರ್ಯಕರ್ತೆಯರಿಗೆ ಪ್ರಸ್ತುತ ನೀಡುತ್ತಿರುವ 8 ಸಾವಿರ ರೂ. ಖಚಿತ ಗೌರವಧನ ಬದಲಾಗಿ 9,500 ರೂ. ಮುಂಗಡವಾಗಿ ನೀಡಲು ರಾಜ್ಯ ಸರಕಾರ ಸಿದ್ಧವಾಗಿ ದೆ. ಪ್ರತಿಭಟನೆ ಕೈ ಬಿಟ್ಟು ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸಹಕಾರ ನೀಡಿ” ಎಂದಿದ್ದಾರೆ.

error: Content is protected !!