ಬೆಂಗಳೂರು: ಕುಟುಂಬ ಕಲಹ ಕಾರಣಕ್ಕೆ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು ಎಂದು ಪತ್ನಿ ಸೇರಿದಂತೆ ಮೂವರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಾಲಹಳ್ಳಿ ಕ್ರಾಸ್ ಬಳಿ ಜ.08ರ ಬುಧವಾರ ಸಂಜೆ ನಡೆದಿದೆ.
ನೆಲಮಂಗಲದ ಆರೋಪಿ ಗಂಗರಾಜು ಹೆಬ್ಬಗೋಡಿಯಲ್ಲಿ ಹೋಂಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು, ಕಳೆದ ಆರು ವರ್ಷಗಳಿಂದ ಜಾಲಹಳ್ಳಿ ಕ್ರಾಸ್‌ನಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತ ವಾಸವಾಗಿದ್ದ. ಕಳೆದ 3 ದಿನಗಳ ಹಿಂದೆ ದಂಪತಿ ನಡುವೆ ಗಲಾಟೆ ನಡೆದಿದ್ದು, ಪೀಣ್ಯ ಪೊಲೀಸ್ ಠಾಣೆಗೆ ಭಾಗ್ಯಮ್ಮ ಅವರು ಗಲಾಟೆ ಸಂಬAಧ ದೂರು ನೀಡಿದ್ದರು. ಅಲ್ಲದೆ ನಿನ್ನೆ ಸಂಜೆ ಮತ್ತೆ ಜಗಳ ನಡೆದಿದ್ದು ಈ ವೇಳೆ ಪತ್ನಿ ಭಾಗ್ಯಮ್ಮ (38), ಪುತ್ರಿ ನವ್ಯಾ (19) ಮತ್ತು ಪತ್ನಿಯ ಅಕ್ಕನ ಮಗಳಾದ ಹೇಮಾವತಿ (22) ಎಂಬ ಮೂವರನ್ನು ಆರೋಪಿ ಗಂಗರಾಜು ಕೊಲೆ ಮಾಡಿ, ಪೀಣ್ಯ ಠಾಣೆ ಪೊಲೀಸರಿಗೆ ಬಂದು ಶರಣಾಗಿದ್ದಾನೆ.
ಮಾರಕಾಸ್ತ್ರಗಳಿಂದ ತಲೆ ಹಾಗೂ ಕೈ ಕಾಲುಗಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಮಚ್ಚಿನಿಂದ ಹೊಡೆದ ರಭಸಕ್ಕೆ ರುಂಡಗಳು ಬೇರೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾಗ್ಯ ಅವರ ಅಕ್ಕನ ಮಗಳು ತುಮಕೂರಿನ ಹೇಮಾವತಿ ಅವರು ಕೆಲವು ತಿಂಗಳಿಂದ ಚಿಕ್ಕಮ್ಮನಾದ ಭಾಗ್ಯಮ್ಮ ಅವರ ಮನೆಯಲ್ಲೇ ವಾಸವಿದ್ದರು ಹಾಗೂ ಗಲಾಟೆ ಮಾಡುವಾಗ ಗಲಾಟೆ ಬಿಡಿಸಲು ಹೋದಾಗ ಅವರನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದು ಈ ವೇಳೆ “ಪತ್ನಿ ನಾನು ಹೇಳಿದ ಮಾತನ್ನು ಕೇಳುತ್ತಿರಲಿಲ್ಲ, ಮಾತಿಗೆ ಮಾತು ಎದುರುತ್ತರ ನೀಡುತ್ತಿದ್ದಳು ಹಾಗೂ ಇಬ್ಬರು ಮಕ್ಕಳು ಸಹ ನನ್ನ ಮಾತಿಗೆ ಬೆಲೆ ಕೊಡುತ್ತಿರಲಿಲ್ಲ. ನಾನು ಏನೇ ಹೇಳಿದರೂ ಕೇಳುತ್ತಿರಲಿಲ್ಲ. ನಾನು ನಿತ್ಯ ಕೆಲಸಕ್ಕೆ ಹೋದ ನಂತರ ನನ್ನ ಪತ್ನಿ ಬೇರೆ ಯಾರೋಂದಿಗೋ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಳು. ಇದರಿಂದ ಅನುಮಾನ ಬಂದು ವಿಚಾರಿಸಿದಾಗ ಸರಿಯಾಗಿ ಉತ್ತರ ನೀಡದೆ ನಿಂದಿಸುತ್ತಿದ್ದಳು. ಹೀಗಾಗಿ ಈ ಕೃತ್ಯ ಎಸಗಿದ್ದೇನೆ” ಎಂದಿದ್ದಾನೆ. ಆರೋಪಿನ ಠಾಣೆ ಶರಣಾಗುವ ವೇಳೆ ಕೃತ್ಯಕ್ಕೆ ಬಳಿಸಿದ ಮಾರಕಾಸ್ತ್ರ ತಂದು ಒಪ್ಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳನ್ನು ಆಸ್ಪತೆಯ ಶವಾಗಾರದಲ್ಲಿ ಇಡಲಾಗಿದ್ದು, ಕುಟುಂಬದವರಿಗೂ ಮಾಹಿತಿ ನೀಡಲಾಗಿದೆ, ಕುಟುಂಬಸ್ಥರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಅವರಿಗೆ ಮೃತ ದೇಹಗಳನ್ನು ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಕಮಿಷನರ್ ವಿಕಾಸ್ ಕುಮಾರ್ ಹಾಗೂ ಉತ್ತರ ವಿಭಾಗದ ಡಿಜಿಪಿ ಸೈದುಲ್ ಅದಾವಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.