‘ಕರಾವಳಿ’ ಚಿತ್ರದ ಟೀಸರ್‌ಗೆ ಫ್ಯಾನ್ಸ್ ಫಿದಾ: ಪ್ರತಿಷ್ಠೆಯ ಕುರ್ಚಿಯೇ ಟೀಸರ್ ನಲ್ಲಿ ಹೈಲೈಟ್: ನಿರೀಕ್ಷೆ ಹೆಚ್ಚಿಸಿದ ಪ್ರಜ್ವಲ್ ದೇವರಾಜ್ ನಟನೆಯ ಚಿತ್ರ..!

ಸ್ಯಾಂಡಲ್‌ವುಡ್‌ನಲ್ಲಿ ವಿಶೇಷವಾಗಿ ಗಮನ ಸೆಳೆದಿರುವ ‘ಕರಾವಳಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಭಾರೀ ಕುತೂಹಲ ಕೆರಳಿಸಿದೆ.

ಈ ಮೊದಲೇ ಚಿತ್ರದ ಪ್ರೋಮೋ ಪ್ರೇಕ್ಷಕರ ಮನ ಗೆದ್ದಿದ್ದು ಈಗ ವಿಭಿನ್ನ ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಸಾಮಾನ್ಯವಾಗಿ ಟೀಸರ್ ನಾಯಕ, ನಾಯಕಿ ಅಥವಾ ಸಿನಿಮಾದ ಒಬ್ಬ ವ್ಯಕ್ತಿಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದರೆ ಕರಾವಳಿಯಿಂದ ಬಂದಿರುವ ಹೊಸ ಟೀಸರ್ ಒಂದು ಪ್ರತಿಷ್ಠೆಯ ವಸ್ತುವಿನ ಮೇಲೆ ಇರುವುದು ವಿಶೇಷ. ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ಪ್ರತಿಷ್ಠೆಯ ಕುರ್ಚಿಯೇ ಹೈಲೆಟ್. “ಅದು ಕುರ್ಚಿಯಲ್ಲ, ಪ್ರತಿಷ್ಠೆಯ ಪಿಶಾಚಿ” ಎನ್ನುವ ಸಂಭಾಷಣೆಯಿಂದ  ಟೀಸರ್ ಪ್ರಾರಂಭವಾಗುತ್ತದೆ. “ಪ್ರತಿಷ್ಠೆಯ ಕುರ್ಚಿ ಮೇಲೆ ಕೂರುವುದಿರಲಿ ಕಣ್ಣಿಟ್ಟವರನ್ನು ಬಿಡಲ್ಲ” ಎಂದು ನಟ ಮಿತ್ರ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಈ ಟೀಸರ್ ಮೈ ಜುಮ್ ಎನ್ನುವಂತಿದೆ. ಟೀಸರ್ ಸಂಕಲನ ಮತ್ತಷ್ಟು ರೋಮಾಂಚನಕಾರಿಯಾಗಿದೆ.

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಮತ್ತು ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಕಂಬಳ ಪ್ರಪಂಚದ ಬಗ್ಗೆ ಇರುವ ಸಿನಿಮಾ. ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್‌ನಲ್ಲಿ ಈ ಸಿನಿಮಾ ಮೂಡಿಬರಲಿದೆ. ಈಗಾಗಲೆ ಪ್ರಜ್ವಲ್ ದೇವರಾಜ್ ಅವರ ಮೂರು ರೀತಿಯ ಲುಕ್ ರಿವೀಲ್ ಆಗಿದೆ. ಯಕ್ಷಗಾನ, ಕಂಬಳ, ಮಹಿಷಾಸುರ ಹೀಗೆ 3 ವೆರೈಟಿ ಗೆಟಪ್‌ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದು, ಪ್ರಜ್ವಲ್ ಇಲ್ಲಿ ಯಕ್ಷಗಾನ ಕಲಾವಿದನಾ ಅಥವಾ ಕಂಬಳ ಪಾತ್ರಧಾರಿಯೇ? ಎನ್ನುವ ಕುತೂಹಲ ಕೂಡ ಮೂಡಿದೆ.

error: Content is protected !!