ಆಹಾರವನ್ನು ದೋಣಿಯ ಮೂಲಕ ನದಿಯ ಉದ್ದಕ್ಕೂ ಮಾರುಕಟ್ಟೆಗೆ ಸಾಗಿಸುತ್ತಿದ್ದ ಸಂದರ್ಭ ದೋಣಿ ಮುಳುಗಡೆಯಾದ ಘಟನೆ ನೈಜೀರಿಯಾದ ನೈಜರ್ ನದಿಯಲ್ಲಿ ಸಂಭವಿಸಿದೆ.
ನ.29ರಂದು ಕೋಗಿ ರಾಜ್ಯದಿಂದ ನೆರೆಯ ನೈಜರ್‌ಗೆ ಹೋಗುತ್ತಿದ್ದ ಬೋಟ್‌ನಲ್ಲಿ ಸುಮಾರು 200 ಪ್ರಯಾಣಿಕರಿದ್ದರು ಎಂದು ನೈಜರ್ ರಾಜ್ಯ ತುರ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಇಬ್ರಾಹಿಂ ಔಡು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ. ಏಕಾಏಕಿ ನಡೆದ ಈ ದುರ್ಘಟನೆಯಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಸ್ಥಳೀಯ ಡೈವರ್ ಗಳು 27 ಶವಗಳನ್ನು ನದಿಯಿಂದ ಹೊರತೆಗೆದಿದ್ದು ಕಾರ್ಯಾಚರಣೆ ಮುಂದುವರಿದೆ. ದೋಣಿ ಮುಳುಗಡೆಗೆ ಕಾರಣವೇನು ಎಂಬುದನ್ನು ಅಧಿಕಾರಿಗಳು ದೃಢಪಡಿಸಿಲ್ಲ. ಆದರೆ ಬೋಟ್ ಓವರ್‌ಲೋಡ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.