ಪುಣೆ: ಮಹಾರಾಷ್ಟ್ರದ ಪುಣೆಯ ಗರ್ವಾರೆ ಸ್ಟೇಡಿಯಂನಲ್ಲಿ ಪಂದ್ಯದ ವೇಳೆ ಕ್ರಿಕೆಟ್ ಆಟಗಾರನೋರ್ವ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಇಮ್ರಾನ್ ಪಟೇಲ್ (35) ಎಂಬ ಆಟಗಾರ, ಆರಂಭಿಕರಾಗಿ ಬ್ಯಾಟಿಂಗ್ ಗೆ ಬಂದರು. ಪಿಚ್‌ನಲ್ಲಿ ಸ್ವಲ್ಪ ಸಮಯ ಕಳೆದ ನಂತರ ಎದೆ ಮತ್ತು ತೋಳಿನ ನೋವಿನ ಬಗ್ಗೆ ಅಂಪೈರ್ ಗೆ ತಿಳಿಸಿದರು. ಆದರೆ, ಪೆವಿಲಿಯನ್ ಗೆ ಹಿಂತಿರುಗುವಾಗ ಇಮ್ರಾನ್ ಕುಸಿದು ಬಿದ್ದಿದ್ದಾರೆ.
ಇಮ್ರಾನ್ ಕುಸಿದು ಬೀಳುತ್ತಿದ್ದಂತೆ ಮೈದಾನದಲ್ಲಿದ್ದ ಇತರ ಆಟಗಾರರು ಅವರತ್ತ ಧಾವಿಸಿ, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಪರೀಕ್ಷಿಸಿದ ಬಳಿಕ ಇಮ್ರಾನ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಆರೋಗ್ಯವಾಗಿದ್ದ ಇಮ್ರಾನ್ ಪಟೇಲ್ ಗೆ ಹೃದಯ ಸ್ತಂಭನವಾಗಿದೆ ಎಂದು ತಿಳಿದುಬಂದಿದೆ. ದೈಹಿಕವಾಗಿ ಸದೃಢರಾಗಿದ್ದ ಅವರು ಆಲ್ ರೌಂಡರ್ ಆಟಗಾರ. “ಅವರು ಯಾವುದೇ ಆರೋಗ್ಯ ಸಮಸ್ಯೆ ಹೊಂದಿಲ್ಲ,” ಎಂದು ಪಂದ್ಯದ ಭಾಗವಾಗಿದ್ದ ಮತ್ತೊಬ್ಬ ಕ್ರಿಕೆಟಿಗ ನಸೀರ್ ಖಾನ್ ಹೇಳಿದ್ದಾರೆ.