ಸಾಂದರ್ಭಿಕ ಚಿತ್ರ
ಚಲಿಸುತ್ತಿದ್ದ ಆಂಬ್ಯುಲೆನ್ಸ್ ನಲ್ಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು ರಸ್ತೆಬದಿಯಲ್ಲಿ ಎಸೆದು ಹೋದ ಘಟನೆ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್(ರೇವಾ ರೇಂಜ್) ಸಾಕೇತ್ ಪಾಂಡೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಬಾಲಕಿ(16) ತನ್ನ ಸಹೋದರಿ ಮತ್ತು ಸೋದರ ಮಾವನೊಂದಿಗೆ ಆಂಬ್ಯುಲೆನ್ಸ್ ನಲ್ಲಿ ಪ್ರಯಾಣಿಸುತ್ತಿದ್ದಳು (ಅವರಲ್ಲಿ ಯಾರೂ ರೋಗಿಯಲ್ಲ). ಮೂವರ ಹೊರತಾಗಿ ಇನ್ನೂ ಇಬ್ಬರು ವ್ಯಕ್ತಿಗಳು, ಚಾಲಕ ಮತ್ತು ಅವರ ಸಹಚರರು ರೋಗಿಯ ಸಾಗಣೆ ವಾಹನದಲ್ಲಿದ್ದರು. ಮಾರ್ಗಮಧ್ಯೆ ನೀರು ತರುವ ನೆಪದಲ್ಲಿ ಬಾಲಕಿಯ ಸಹೋದರಿ ಹಾಗೂ ಆಕೆಯ ಸೋದರ ಮಾವ ವಾಹನದಿಂದ ಇಳಿದಿದ್ದಾರೆ. ಆಂಬ್ಯುಲೆನ್ಸ್ ಚಾಲಕ, ಅವರಿಗಾಗಿ ಕಾಯುವ ಬದಲು ವೇಗವಾಗಿ ವಾಹನ ಓಡಿಸಿದ್ದಾನೆ. ನಂತರ, ಅವನೊಂದಿಗೆ ಪ್ರಯಾಣಿಸುತ್ತಿದ್ದ ಚಾಲಕನ ಸಹವರ್ತಿ ರಾಜೇಶ್ ಕೇವತ್, ಸುನ್ಸಾನ್ ಗ್ರಾಮದಲ್ಲಿ ಚಲಿಸುತ್ತಿದ್ದ ಆಂಬ್ಯುಲೆನ್ಸ್ನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ರಾತ್ರಿಯಿಡೀ ಬಾಲಕಿಯನ್ನು ಒತ್ತೆಯಾಳಾಗಿಟ್ಟ ನಂತರ, ಮರುದಿನ ಬೆಳಿಗ್ಗೆ ಇಬ್ಬರು ಆರೋಪಿಗಳು ಅವಳನ್ನು ರಸ್ತೆಬದಿಯಲ್ಲಿ ಎಸೆದರು ಎಂದು ಹೇಳಿದ್ದಾರೆ.
ಘಟನೆಯ ಬಳಿಕ ಸಂತ್ರಸ್ತೆ ಮತ್ತು ಆಕೆಯ ತಾಯಿ ಪೊಲೀಸರನ್ನು ಸಂಪರ್ಕಿಸಿದ್ದು, ಆರೋಪಿಗಳಾದ ಕೇವತ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪೈಕಿ ಇಬ್ಬರು ಆರೋಪಿಗಳಾದ ಆಂಬ್ಯುಲೆನ್ಸ್ ಚಾಲಕ ವೀರೇಂದ್ರ ಚತುರ್ವೇದಿ ಮತ್ತು ಆತನ ಸಹಚರ ಕೇವತ್ ಅವರನ್ನು ಈಗಾಗಲೆ ಬಂಧಿಸಲಾಗಿದ್ದು ಅಪರಾಧಕ್ಕೆ ಕುಮ್ಮಕ್ಕು ನೀಡಿದ ಆರೋಪ ಹೊತ್ತಿರುವ ಬಾಲಕಿಯ ಸಹೋದರಿ ಮತ್ತು ಸೋದರ ಮಾವನ ಬಂಧನಕ್ಕೆ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಎಲ್ಲಾ ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಸಂಬAಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.