ಹೆಣ್ಣಾನೆಯ ಕಳೇಬರ
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯ ಬಾಚಹಳ್ಳಿಯಲ್ಲಿ ಹೆಣ್ಣಾನೆಯೊಂದರ ಮೃತದೇಹ ಪತ್ತೆಯಾಗಿದೆ.
ಸುಮಾರು 30 ವರ್ಷ ವಯಸ್ಸಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಹಾಗೂ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆನೆಯ ಬಾಯಿ, ಗುದದ್ವಾರ, ಕಿವಿ, ಬಾಲದಲ್ಲಿ ರಕ್ತ ಸೋರಿಕೆಯಾಗಿರುವುದು ಕಂಡು ಬಂದಿದ್ದು, ಪರಿಶೀಲನೆಯ ಸಮಯದಲ್ಲಿ ಪಶು ವೈದ್ಯ ಡಾ.ಮಿರ್ಜಾ ವಾಸೀಂ ಅಂಥ್ರಾಕ್ಸ್ ರೋಗದ ಗುಣ ಲಕ್ಷಣಗಳು ಮೇಲ್ನೋಟಕ್ಕೆ ಕಂಡುಬಂದಿವೆ ಎಂದಿದ್ದಾರೆ.
ಆನೆಯ ಅಂಗಾಂಗಗಳಮಾದರಿಗಳನ್ನು ಸಂಗ್ರಹಿಸಿ, ಬೆಂಗಳೂರಿನ ವಿಜ್ಞಾನ ಪ್ರಯೋಗ ಶಾಲೆಗೆ ಕಳುಹಿಸಲಾಗಿದ್ದು, ಮೃತದೇಹವನ್ನು ಸುಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ನೆರಡಿ ರೋಗ ಎಂದು ಕರೆಯುವ ಈ ಖಾಯಿಲೆ ಭಯಾನಕವಾಗಿದ್ದು, ಸಾಂಕ್ರಾಮಿಕವಾಗಿದೆ. ಕಾಡು ಪ್ರಾಣಿಗಳಿಗೂ, ಜಾನುವಾರುಗಳಿಗೂ ಇದು ಬಾಧಿಸುತ್ತದೆ.