10 ವರ್ಷಗಳಿಂದ ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆ: ಕಾಡುಗೋಡಿ ಠಾಣಾ ಪೊಲೀಸರಿಂದ ಬಂಧನ

ಬೆಂಗಳೂರು: ಕಳೆದ 10 ವರ್ಷಗಳಿಂದ ಕಾಡುಗೋಡಿ ಸಮೀಪದ ಚಿಕ್ಕನಹಳ್ಳಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ದೇಶದ ಪ್ರಜೆಯನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

13 ವರ್ಷಗಳ ಹಿಂದೆ ಬಾಂಗ್ಲಾದೇಶದಿAದ ಭಾರತಕ್ಕೆ ಬಂದಿದ್ದ ಬಾಂಗ್ಲ ಪ್ರಜೆ ರಂಜಾಕ್ ಶೇಕ್, ಪಶ್ಚಿಮ ಬಂಗಾಳದಲ್ಲಿ ಜನಿಸಿರುವುದಾಗಿ ನಕಲಿ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿ ಹಲವು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಬಳಿಕ 10 ವರ್ಷಗಳ ಹಿಂದೆ ನಗರಕ್ಕೆ ಬಂದು ಅಕ್ರಮವಾಗಿ ನೆಲೆಸಿದ್ದ.

ಈತ ಈ ಹಿಂದೆ ಬಾಂಗ್ಲ ದೇಶದಲ್ಲಿ ಯುವತಿಯನ್ನು ಮದುವೆಯಾಗಿದ್ದು, ಬಳಿಕ ಆಕೆಯನ್ನು ಅಲ್ಲಿಯೇ ಬಿಟ್ಟು ಅಕ್ರಮವಾಗಿ ಭಾರತಕ್ಕೆ ಬಂದಿದ್ದಾನೆ. ಈ ಸಂಬಂಧ  ಆತನ ಪತ್ನಿ ಬಾಂಗ್ಲಾದೇಶದಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ರಾಜ್ಯ ಗುಪ್ತಚರ ವಿಭಾಗದ ಮಾಹಿತಿ ಆಧರಿಸಿ ಕಾರ್ಯಾ ಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ವೇಳೆ ನಕಲಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಈತ ಮತ್ತೊಂದು ಯುವತಿಯನ್ನು ಮದುವೆಯಾಗಿ ಬೆಂಗಳೂರಿನ ಚಿಕ್ಕನ ಹಳ್ಳಿಯಲ್ಲಿ ವಾಸವಾಗಿದ್ದ. ಜೀವನ ನಿರ್ವಹಣೆಗಾಗಿ ಗುಜರಿ ವ್ಯಾಪಾರ ಮಾಡಿಕೊಂಡಿದ್ದು, ಸದ್ಯಕ್ಕೆ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 3 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

error: Content is protected !!