ಬೆಳ್ತಂಗಡಿ: ದಕ್ಷಿಣ ಕನ್ನಡ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆ ಇಲ್ಲಿ ನಡೆದ ಬಜಿರೆ- ಪಡ್ಡಂದಡ್ಕ – ನಿಟ್ಟಡೆ ವಲಯದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನವ ಚೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಪೂರ್ವ ಸಾಧನೆಗೈದಿದ್ದಾರೆ. ಪ್ರಾಥಮಿಕ ವಿಭಾಗದಲ್ಲಿ 9 ಚಿನ್ನದ ಪದಕ, ಎಂಟು ಬೆಳ್ಳಿಯ ಪದಕ ಹಾಗೂ 9 ಕಂಚಿನ ಪದಕಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡು ಶಾಲಾ ಕೀರ್ತಿಯನ್ನು ಬೆಳಗಿಸಿದ್ದಾರೆ.
ಹಾಗೂ ನಾರಾವಿ ಪ್ರೌಢ ಶಾಲೆಯಲ್ಲಿ ನಡೆದ ನಾರಾವಿ ವಲಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ನವಚೇತನ ಪ್ರೌಢಶಾಲೆಯ ವಿದ್ಯಾರ್ಥಿಗಳು 9 ಚಿನ್ನದ ಪದಕ, 6 ಬೆಳ್ಳಿಯ ಪದಕ ಹಾಗೂ 5 ಕಂಚಿನ ಪದಕಗಳನ್ನು ಪಡೆದಿರುತ್ತಾರೆ.
17 ರ ವಯೋಮಾನದ ಬಾಲಕರ ವಿಭಾಗದಲ್ಲಿ ಶಾಲಾ ಬಾಲಕರ ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಗಳಿಸಿರುತ್ತದೆ. ಹಾಗೂ 17ರ ವಯೋಮಾನದ ಬಾಲಕರ ವಿಭಾಗದ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಸೋಹನ್ ಪಿಯೋ ರೇಗೋ ಇವರು ಪಡೆದಿರುತ್ತಾರೆ. ಪ್ರಾಥಮಿಕ ವಿಭಾಗದಲ್ಲಿ 17 ವಿದ್ಯಾರ್ಥಿಗಳು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಒಟ್ಟು 16 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಒಟ್ಟು 46 ಪದಕಗಳನ್ನು ಬಾಚಿಕೊಂಡು, ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅದ್ವಿತೀಯ ಸಾಧನೆಯನ್ನು ತೋರಿದ, ಪ್ರೌಢಶಾಲಾ ಹಾಗೂ ಪ್ರಾಥಮಿಕ ವಿಭಾಗದ ಕ್ರೀಡಾಪಟುಗಳನ್ನು ಹಾಗೂ ಇವರಿಗೆ ಅತ್ಯುತ್ತಮ ತರಬೇತಿಯನ್ನು ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ದೀಕ್ಷಿತ್ ಇವರನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಶಾಲಿನಿ ಡಿಸೋಜಾ, ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.