ಮೋಸದ ಪ್ರೀತಿಗೆ 19ರ ಯುವತಿ ಬಲಿ: ಗರ್ಭಿಣಿ ಮಗಳ ಸಾವಿಗೆ ಹೆತ್ತವರು ಕಣ್ಣೀರು!: ಸಲೀಮ್, ಸಂಜು ಆಗಿ ಬದಲಾವಣೆ: ನಿರ್ಜನ ಪ್ರದೇಶದಲ್ಲಿ ಸೋನಿ ಹತ್ಯೆ..!

ನವದೆಹಲಿ: ‘ಪ್ರೀತಿ’ ಮನುಷ್ಯ ನಡುವೆ ಸಂಬಂಧಗಳನ್ನು ಬೆಸೆಯುವ ಸಂಬಂಧ, ಆದರೆ ಇತ್ತೀಚೆಗೆ ‘ಪ್ರೀತಿ’ ಹೆಸರಲ್ಲಿ ಮೋಸ ನಡೆಯುವುದರ ಜೊತೆಗೆ ಕೆಲವರ ಆತ್ಮಹತ್ಯೆ, ಇನ್ನೂ ಅನೇಕರ ಹತ್ಯೆಯೇ ನಡೆದು ಬಿಡುತ್ತದೆ. 19 ವರ್ಷದ ಯುವತಿಯೋರ್ವಳು ಮೋಸದ ಪ್ರೀತಿಗೆ ಸಿಲುಕಿ ತನ್ನ ಪ್ರಿಯಕರನಿಂದಲೇ ಹತ್ಯೆಯಾಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

ಸಲೀಮ್ ಎಂಬ ಮುಸ್ಲಿಂ ಹುಡುಗ, ತನ್ನ ಹೆಸರನ್ನು ಸಂಜು ಎಂದು ಬದಲಿಸಿಕೊಂಡು, ಇನ್‌ಸ್ಟಾಗ್ರಾಮ್‌ನಲ್ಲಿ 19 ವರ್ಷದ ಸೋನಿ ಎಂಬ ಯುವತಿಯೊಂದಿಗೆೆ ಸ್ನೇಹ ಬೆಳಸಿದ್ದ. ಆರಂಭದಲ್ಲಿ ಸೋನಿ ಸಂಜು ಜತೆ ಸಹಜವಾಗಿ ಎಲ್ಲರಿಗೂ ಹೇಗೆ ಪ್ರತಿಕ್ರಿಯೆ ನೀಡುತ್ತಿದ್ದಳೋ ಅಂತೆಯೇ ಈತನಿಗೂ ಸ್ಪಂದಿಸಿದ್ದಾಳೆ. ಆದರೆ, ದಿನೇ ದಿನೇ ಆಕೆಯನ್ನು ತನ್ನತ್ತ ಸೆಳೆದುಕೊಳ್ಳುವಷ್ಟು ಸ್ನೇಹ ಬೆಳಸಿದ ಸಂಜು, ಪ್ರೀತಿ ವಿಷಯ ಪ್ರಸ್ತಾಪಿಸಿದ್ದ. ಇದಕ್ಕೆ ಓಕೆ ಎಂದಿದ್ದ ಆಕೆ, ಗರ್ಭಿಣಿಯಾಗುವ ಹಂತವನ್ನು ಸಹ ಮೀರಿ ಬಿಟ್ಟಿದ್ದಳು.

ತಾನು ಗರ್ಭಿಣಿ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಆಕೆ ಸಲೀಮ್ ಬಳಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಆದರೆ ಇದಕ್ಕೆ ಆತ ಒಪ್ಪಿಗೆ ನೀಡಿಲ್ಲ. ಬದಲಿಗೆ ಮಗುವನ್ನು ತೆಗೆದು ಬಿಡು ಎಂದು ಬಲವಂತ ಮಾಡಿದ್ದಾನೆ. ಇದ್ಯಾವುದಕ್ಕೂ ಒಪ್ಪದ ಸೋನಿ, ತನ್ನ ಕುಟುಂಬಸ್ಥರ ಬಳಿ ನಾನು ಅವನನ್ನು ಪ್ರೀತಿಸುತ್ತಿದ್ದೇನೆ. ನಾವಿಬ್ಬರು ವಿವಾಹವಾಗ್ತೀವಿ. ನಿಮ್ಮ ಅನುಮತಿ ಬೇಕಿದೆ ಎಂದು ಕೇಳಿಕೊಂಡಿದ್ದಾಳೆ. ಆದರೆ, ಆಕೆಯ ಪೋಷಕರು ಮದುವೆ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲಿಲ್ಲ. ಇದರಿಂದ ಮನನೊಂದ ಸೋನಿ, ತನ್ನ ಮನೆಯಿಂದ ಒಂದಷ್ಟು ವಸ್ತುಗಳನ್ನು ತೆಗೆದುಕೊಂಡು, ಸಲೀಮ್ ಬಳಿ ಬಂದಿದ್ದಾಳೆ. ಇಲ್ಲಿಯೂ ಇಬ್ಬರ ನಡುವೆ ಮಗು ತೆಗೆಸುವ ವಿಷಯಕ್ಕೆ ಹಾಗೂ ಮದುವೆ ವಿಚಾರಕ್ಕೆ ಜಟಾಪಟಿ ನಡೆದಿದೆ. ಇದರಿಂದ ಮುಕ್ತಿ ಪಡೆಯುವ ಸಲುವಾಗಿ ಸಲೀಂ ತನ್ನ ಇಬ್ಬರು ಸ್ನೇಹಿತರ ಜತೆಗೆ ಕೈಜೋಡಿಸಿ, ಆಕೆಯನ್ನು ಹರಿಯಾಣದ ರೋಹ್ಟಕ್‌ಗೆ ಕರೆದೊಯ್ದರು, ಹತ್ಯೆಗೈದಿದ್ದಾನೆ. ಅಲ್ಲಿಯೇ ನಿರ್ಜನ ಪ್ರದೇಶದಲ್ಲಿ ಅವಳ ಮೃತದೇಹವನ್ನು ಹೂತು, ಸ್ಥಳದಿಂದ ಪರಾರಿಯಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದ ಪೊಲೀಸರು ಇದೀಗ ಆರೋಪಿ ಸಲೀಂ ಮತ್ತು ಆತನ ಒಬ್ಬ ಸ್ನೇಹಿತನನ್ನು ಬಂಧಿಸಿದ್ದು, ಮತ್ತೊಬ್ಬ ತಲೆಮರಿಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಹುಡುಕಾಟ ಮುಂದುವರಿದಿದೆ.

error: Content is protected !!