ಆನೇಕಲ್: ರಾಸಾಯನಿಕಯುಕ್ತ ಕಲುಷಿತ ನೀರು ಹರಿದ ಪರಿಣಾಮ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳ ಮಾರಣಹೋಮ ನಡೆದ ಘಟನೆ ಶಾಂತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಗಮಂಗಲ ಕೆರೆಯಲ್ಲಿ ಅ.18ರಂದು ಸಂಭವಿಸಿದೆ.
ಬಯೋಕಾನ್ ಪ್ರತಿಷ್ಠಾನದ ಮೂಲಕ ಚಿಕ್ಕನಾಗಮಂಗಲ ಕೆರೆಯನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಬಯೋಕಾನ್ ಕೆರೆ ಎಂದೇ ಕರೆಯಲಾಗುತ್ತಿದೆ. ಈ ಕೆರೆಯಲ್ಲಿ ಲಕ್ಷಾಂತರ ಮೀನುಗಳಿದ್ದು ಆದರೆ ತ್ಯಾಜ್ಯ ನೀರು ಹರಿದ ಪರಿಣಾಮ ಕೆರೆಯಲ್ಲಿನ ಜಲಚರಗಳಿಗೆ ಹಾನಿಯುಂಟಾಗಿದೆ ಎನ್ನಲಾಗುತ್ತಿದೆ.
ಕೆರೆಗೆ, ಸುತ್ತಮುತ್ತಲಿನ ಅಪಾರ್ಟ್ಮೆಂಟ್ ಮತ್ತು ಬಡಾವಣೆಗಳ ತ್ಯಾಜ್ಯ ನೀರು ಹಾಗೂ ಸಮೀಪದಲ್ಲಿರುವ ಬಿಬಿಎಂಪಿ ಘನತ್ಯಾಜ್ಯ ಘಟಕದ ಕಲುಷಿತ ನೀರು ಈ ಕೆರೆಗೆ ಸೇರಿದ ಕಾರಣ ಕಳೆದ ಮೂರು ದಿನಗಳಿಂದ ಮೀನುಗಳು ಒದ್ದಾಡಿ, ಒದ್ದಾಡಿ ಮೃತಪಟ್ಟಿವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಘಟನೆಯ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.