‘ಬಿಗ್ ಬಾಸ್’ಗೆ ಅಭಿನಯ ಚಕ್ರವರ್ತಿ ಸುದೀಪ್ ಅವರು ವಿದಾಯ ಘೋಷಿಸಿದ ಬೆನ್ನಲ್ಲೆ ಬಾರೀ ಊಹಪೋಹಗಳು ಕೇಳಿಬರುತ್ತಿದೆ. ಅದರಲ್ಲಿಯೂ, ಕಲರ್ಸ್ ವಾಹಿನಿಯಿಂದ, ಬಿಗ್‌ಬಾಸ್ ಆಯೋಜಕರಿಂದ ಕಿಚ್ಚ ಸುದೀಪ್‌ಗೆ ಅವಮಾನ ಆಗಿದೆ, ಹಾಗಾಗಿ ಅವರು ಈ ನಿರ್ಣಯ ತೆಗೆದುಕೊಂಡಿದ್ದಾರೆ ಎಂಬ ವಿಚಾರ ಹೆಚ್ಚಾಗಿ ಹರಿದಾಡುತ್ತಿದ್ದು, ಈ ಬಗ್ಗೆ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಷವಾದ ಎಕ್ಸ್ ಖಾತೆಯ ಮೂಲಕ ನಟ ಸುದೀಪ್ ಕೊಟ್ಟ ಸ್ಪಷ್ಟನೆ ಹೀಗಿದೆ. “ಇತ್ತೀಚೆಗೆ ನಾನು ಮಾಡಿದ ಟ್ವೀಟ್‌ಗೆಸಂಬಂಧಿಸಿದಂತೆದ ನಿಮ್ಮೆಲ್ಲಾ ಪ್ರೀತಿ ಮತ್ತು ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ. ಈ ವಾತ್ಸಲ್ಯ ನಿಜವಾಗಿಯೂ ಮನಮುಟ್ಟುವಂತಿದೆ. ಅದಾಗ್ಯೂ, ಚಾನಲ್ ಮತ್ತು ನನ್ನ ನಡುವೆ ಮನಸ್ತಾಪಗಳಿವೆ ಎಂದು ಯಾವುದೇ ತರಹದ ಊಹೆಗಳನ್ನು ಮಾಡದಂತೆ ಕಾಮೆಂಟ್‌ಗಳು ಮತ್ತು ವಿಡಿಯೋಗಳನ್ನು ಮಾಡುವವರಲ್ಲಿ ವಿನಂತಿಸುತ್ತಿದ್ದೇನೆ. ನಾವು ಸುದೀರ್ಘ ಮತ್ತು ಸಕಾರಾತ್ಮಕ ಪ್ರಯಾಣವನ್ನು ನಡೆಸಿದ್ದೇವೆ. “ಅಗೌರವ” ಎಂಬ ಪದವನ್ನು ಅದರೊಂದಿಗೆ ಸೇರಿಸಬೇಡಿ. ಈ ವಿಷಯದ ಸುತ್ತಲಿನ ಊಹಾಪೋಹಗಳು ಆಧಾರರಹಿತವಾಗಿವೆ. ನನ್ನ ಟ್ವೀಟ್ ನೇರ ಮತ್ತು ಪ್ರಾಮಾಣಿಕವಾಗಿದೆ. ಕಲರ್ಸ್ನೊಂದಿಗಿನ ನನ್ನ ಸಂಬಂಧ ಅದ್ಭುತವಾಗಿದೆ. ಅವರು ಯಾವಾಗಲೂ ನನ್ನನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ನಿರ್ದೇಶಕ ಪ್ರಕಾಶ್ ಅವರು ಪ್ರತಿಭಾವಂತ ಮತ್ತು ಎನರ್ಜಿಟಿಕ್ ವ್ಯಕ್ತಿತ್ವ. ನಾನು ಅವರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ನಾನು ಕೆಲಸ ಮಾಡುತ್ತಿರುವ ತಂಡವು ಅನಗತ್ಯ ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕುಳಿತು ಆನಂದಿಸುವ ವ್ಯಕ್ತಿ ನಾನಲ್ಲ” ಎಂದು ತಿಳಿಸಿದ್ದಾರೆ.