ಬೆಳ್ತಂಗಡಿ: ಗುರುವಾಯನಕೆರೆ ಉಪ್ಪಿನಂಗಡಿ ಹೆದ್ದಾರಿಯ ಗೋವಿಂದೂರು – ಮಾವಿನಕಟ್ಟೆ ಬಸ್ ನಿಲ್ದಾಣ ನಡುವಿನ ಯಂತ್ರಡ್ಕ ಬಳಿಯ ಕೊಡೆಂಚಡ್ಕ ಬಳಿ ರಸ್ತೆ ಭಾಗಶಃ ಕುಸಿದಿದ್ದು ಖೆಡ್ಡಾ ತೋಡಿದಂತೆ ಕಾಣುತ್ತಿದೆ, ರಾತ್ರಿ ವಾಹನಗಳು ಗಮನಿಸದಿದ್ದರೆ ರಸ್ತೆಯಿಂದ ಕೆಳಗೆ ಉರುಳುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಪ್ರಜಾಪ್ರಕಾಶ ನ್ಯೂಸ್ ಗಮನ ಸೆಳೆದಿದ್ದರೂ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಇದೀಗ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದ್ದು ಸಮಸ್ಯೆ ಗಂಭೀರವಾಗಿದೆ.
ಅಗಲ ಕಿರಿದಾದ ಈ ರಸ್ತೆಯ ಬಳಿ ಹಿಂದೆಯೇ ರಸ್ತೆ ಹದಗೆಟ್ಟಿತ್ತು. ಕಳೆದ ವರ್ಷ ಸಣ್ಣ ನೀರಾವರಿ ಇಲಾಖೆ ಏತ ನೀರಾವರಿ ಪೈಪ್ ಅಳವಡಿಕೆ ಸಂದರ್ಭದಲ್ಲಿ ರಸ್ತೆ ಪಕ್ಕವೇ ಮತ್ತೆ ಹೊಂಡ ತೋಡಿ ಪೈಪ್ ಹಾಕಿದ ಪರಿಣಾಮ ಸಮಸ್ಯೆ ಉಲ್ಬಣಿಸಿದೆ. ನೀರು ಹರಿಯುವ ತೋಡು ಪಕ್ಕದಲ್ಲೇ ಇದ್ದು, ಮಳೆಗಾಲದಲ್ಲಿ ಇದೀಗ ರಸ್ತೆಯನ್ನೇ ನುಂಗುವಂತೆ ಬದಿ ಕುಸಿತವಾಗಿದೆ. ಆದರೆ ಸವಾರರನ್ನು ಎಚ್ಚರಿಸುವ ಯಾವುದೇ ಕ್ರಮ ಕೈಗೊಂಡಿಲ್ಲಿ. ಎರಡು ಘನ ವಾಹನಗಳು ಎದುರಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಬೆಳ್ತಂಗಡಿ- ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಇದಾಗಿದ್ದು, ಪ್ರತೀ ನಿತ್ಯ ಖಾಸಗಿ, ಸರಕಾರಿ ಬಸ್, ಶಾಲಾ ಬಸ್ ಗಳು ಇತರೇ ವಾಹನಗಳು ನಿರಂತರವಾಗಿ ಓಡಾಡುತ್ತಿರುತ್ತದೆ. ರಸ್ತೆಯ ಕಾಲು ಭಾಗ ಕುಸಿದಿದ್ದು ಆತಂಕಕಾರಿಯಾಗಿದೆ. ಪ್ರತೀ ದಿನ ಸಂಜೆ ಮಳೆಯೂ ಹೆಚ್ಚಾಗಿರುವುದರಿಂದ ರಸ್ತೆ ಮತ್ತಷ್ಟು ಕುಸಿಯುವ ಲಕ್ಷಣ ಗೋಚರವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಶೀಘ್ರದಲ್ಲಿ ಗಮನವಹಿಸಬೇಕಿದೆ.
ನಿರ್ವಹಣೆಗೆ ಉದಾಸೀನ:
ಈಗಾಗಲೇ ರಸ್ತೆಯ 10 ಕೀ.ಮೀ. ಅಭಿವೃದ್ಧಿಗೆ 8 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ನಿರ್ವಹಣಾ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಚರಂಡಿ ನಿರ್ಚಹಣೆಯಂತೂ ಇಲ್ಲವೇ ಇಲ್ಲ ಎಂಬಂತಾಗಿದೆ. ವಾರದ ಹಿಂದೆ ಜೆಸಿಬಿ ಬಳಸಿ ರಸ್ತೆಯ ಸ್ವಚ್ಛ ಮಾಡಿ ಚರಂಡಿ ಬಿಡಿಸುವ ಕಾರ್ಯ ಮಾಡಿದ್ದರೂ ಕಾಟಾಚಾರಕ್ಕೆ ಮಾಡಲಾಗಿದೆ. ಗುರುವಾಯನಕೆರೆ ಬಳಿ, ರೇಷ್ಮೆ ರೋಡು ಬಳಿ, ನಡುವಲ್ಲಿ ಕೆಲವು ಭಾಗಗಳಲ್ಲಿ ಕೆಲವು ಮೀಟರುಗಳಷ್ಟು ಜಾಗದಲ್ಲಿ ಸ್ವಚ್ಛಗೊಳಿಸಿ ಕೊನೆಗೆ ಉಪ್ಪಿನಂಗಡಿ ಇಳಿಜಾರಿನಲ್ಲಿ ಮಾತ್ರ ಈ ಕಾಮಗಾರಿ ನಡೆಸಿ ಕೈ ತೊಳೆದುಕೊಳ್ಳಲಾಗಿದೆ. ನಡುವಲ್ಲಿ ಎಲ್ಲಿಯೂ ಪೂರ್ಣ ಪ್ರಮಾಣದ ನಿರ್ವಹಣಾ ಕಾಮಗಾರಿ ನಡೆಸಿಲ್ಲ.
ಸಾಗುವುದೇ ಸಾಹಸ:
ರಸ್ತೆಯು ಬಹುತೇಕ ಹದಗೆಟ್ಟಿದ್ದು 20 ಕೀ.ಮೀ. ಕೂಡ ಸಂಪೂರ್ಣ ಹೊಂಡಮಯವಾಗಿದೆ. ಹೊಂಡಗಳನ್ನು ಮುಚ್ಚಲೂ ಬೇಜವಾಬ್ದಾರಿ ತೋರಲಾಗಿದೆ. ಕೆಲವು ಕಡೆ ಮಣ್ಣು ತುಂಬಲಾಗಿದೆ. ಕೆಲವು ಕಡೆ ಕಳಪೆ ವೆಟ್ ಮಿಕ್ಸ್ ಹಾಕಿದ್ದರೂ ದೊಡ್ಡ ಗಾತ್ರದ ಬೋಲ್ಡ್ರಸ್ ಜಲ್ಲಿ ಹಾಕಿದ ಪರಿಣಾಮ ದ್ವಿಚಕ್ರ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ. ಮಳೆ ಬಂದರೆ ರಸ್ತೆಯಲ್ಲಿಯೇ ನೀರು ನಿಲ್ಲುತ್ತಿದೆ. ಕುಪ್ಪೆಟ್ಟಿ ಬಳಿ ಖಾಸಗಿ ಜಾಗದಿಂದ ನೀರು ರಸ್ತೆಯಲ್ಲಿ ಹರಿದು ದ್ವಿಚಕ್ರ ವಾಹನಸವಾರರಿಗೆ ಅಭಿಷೇಕ ಮಾಡುತ್ತಿದೆ. ಮಳೆ ಬರದಿದ್ದರೂ ಕಟ್ಟಡ ಕಾಮಗಾರಿಯ ನೀರು ಹೆದ್ದಾರಿಗೆ ಹರಿಯುತ್ತಿದೆ. ಈ ಎಲ್ಲಾ ಎಡವಟ್ಟುಗಳನ್ನು ಸಾರ್ವಜನಿಕರ ತೆರಿಗೆ ಹಣ ಬಳಸಿಕೊಂಡು ಕಚೇರಿಯಲ್ಲಿ ಎಸಿ ಹಾಕಿಕೊಂಡು ಅದರಡಿಯಲ್ಲಿ ಆರಾಮವಾಗಿ ಮಲಗಿ ನಿದ್ರಿಸುತ್ತಿರುವ ಅಧಿಕಾರಿಗಳು ಗಮನಿಸಿ ಕೂಡಲೇ ಕ್ರಮಕೈಗೊಳ್ಳಬೇಕಿದೆ. ಐಷಾರಾಮಿ ಸರಕಾರಿ ವಾಹನಗಳಲ್ಲಿ ಸಂಚರಿಸುವ ಅಧಿಕಾರಿಗಳಿಗೂ ಸಾರ್ವಜನಿಕರ ಸಮಸ್ಯೆ ತೋರದಿರುವುದು ದುರಂತ.
ಇತಿಹಾಸದತ್ತ:
15 ವರ್ಷಗಳ ಹಿಂದೆ ಬೃಹತ್ ಹೊಂಡಗಳಿಂದ ಬಸ್ ಸಂಚರಿಸಲೂ ಅಪಾಯ ಎಂಬಂತೆ ಕುಖ್ಯಾತಿಯನ್ನು ಪಡೆದಿದ್ದ ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆ ಬಳಿಕ ಅಭಿವೃದ್ಧಿಗೊಂಡು ಡಾಮರೀಕರಣವಾಗಿ ಉತ್ತಮ ರಸ್ತೆಯಾಗಿ ಬದಲಾಗಿತ್ತು. ಆದರೆ ಚರಂಡಿ ಸೇರಿದಂತೆ ಕಳಪೆ ಕಾಮಗಾರಿ ಪರಿಣಾಮ ಮತ್ತೆ ಹಿಂದಿನ ಇತಿಹಾಸವನ್ನು ನೆನಪಿಸುವಂತೆ ಮಾಡಿದೆ.
ಈ ರಸ್ತೆಯಲ್ಲಿ ಎ.ಸಿ. ಸಹಿತ ಅಧಿಕಾರಿಗಳು ಸಂಚರಿಸುತ್ತಿದ್ದು ಸಾರ್ವಜನಿಕರ ನೋವಿಗೆ ಕೂಡಲೇ ಸ್ಪಂದಿಸಬೇಕಾದ ಅನಿವಾರ್ಯತೆ ಇದೆ. ಸಾರ್ವಜನಿಕರ ನಿತ್ಯ ಗೋಳಾಟಕ್ಕೆ ಮುಕ್ತಿ ಸಿಗಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.