ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ನಾವಲ್ ಟಾಟಾ (86) ನಿಧನರಾಗಿದ್ದು ಅವರ ಬದುಕಿನ ಒಂದೊAದೇ ಸಾಧನೆಗಳು ಜನಮಾನಸ ಮುಂದೆ ಬಂದು ನಿಂತಿದೆ.
ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿಯಾಗಿರುವ ಇವರ ಕನಸಿನ ಯೋಜನೆಯೊಂದು ನಷ್ಟದಲ್ಲಿದ್ದಾಗ ಇವರಿಗೆ ಅವಮಾನವಾಗಿತ್ತು. ಆದರೆ ತನಗಾದ ಅವಮಾನವನ್ನು ಸವಾಲಾಗಿ ಸ್ವೀಕರಿಸಿ ಅವಮಾನಿಸಿದ್ದ ಕಂಪನಿಯನ್ನೇ ಉಳಿಸಿದ ಘಟನೆಯೊಂದು ನಡೆದಿತ್ತು.
1998ರಲ್ಲಿ ರತನ್ ಟಾಟಾ ಅವರ ಕನಸಿನ ಯೋಜನೆ ‘ಟಾಟಾ ಇಂಡಿಕಾ’ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಆದರೆ, ಕಾರು ಸರಿಯಾಗಿ ಮಾರಾಟವಾಗದೆ ಸಂಸ್ಥೆ ನಷ್ಟದಲ್ಲಿತ್ತು. ಹೀಗಾಗಿ ಈ ಕಂಪನಿಯನ್ನ ಮಾರಲು ಪ್ರಸಿದ್ಧ ಫೋರ್ಡ್ ಕಂಪನಿ ಮೊರೆ ಹೋಗಿದ್ದರು. ಆದರೆ, “ಕಾರಿನ ಸಹವಾಸ ನಿಮಗ್ಯಾಕೆ ಬೇಕಿತ್ತು” ಅಂತಾ ಆ ಕಂಪನಿ ಅವಮಾನಿಸಿ, ಬಳಿಕ ಖರೀದಿಸೋದಾಗಿ ಹೇಳಿ ಮತ್ತೆ ಇತ್ತ ತಿರುಗಿಯೇ ನೋಡಿರಲಿಲ್ಲವಂತೆ.
ಇದೇ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ್ದ ರತನ್ ಟಾಟಾ ಅವರು ಇಂಡಿಕಾ ಕಾರು ಮತ್ತು ಟಾಟಾ ಮೋಟರ್ಸ್ ಕಂಪನಿಯನ್ನ ಲಾಭದ ಉತ್ತುಂಗಕ್ಕೆ ತಂದು ನಿಲ್ಲಿಸಿದರು. ಎಷ್ಟರಮಟ್ಟಿಗೆ ಅಂದ್ರೆ, 2008 ರಲ್ಲಿ ದಿವಾಳಿಯಾಗಿದ್ದ ಫೋರ್ಡ್ ಗ್ರೂಪ್‌ನ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯನ್ನೇ ಖರೀದಿಸಿದರು. ಆಗ ಫೋರ್ಡ್ ಕಂಪನಿ ರತನ್ ಟಾಟಾ ಅವರಿಗೆ ‘‘ನಮ್ಮ ಮಾನ ಉಳಿಸಿದ್ರಿ’’ ಎಂದು ಧನ್ಯವಾದ ಅರ್ಪಿಸಿತ್ತು.
ಈ ಕಥೆಯನ್ನ ಭಾರತದ ಉದ್ಯಮ ವಲಯದಲ್ಲಿ ಹಲವು ಉದ್ಯಮಿಗಳು ಸ್ಫೂರ್ತಿಯಂತೆ ಆಗಾಗ ನೆನಪಿಸಿಕೊಳ್ಳುತ್ತಿರುತ್ತಾರೆ.