ಮಾಗಡಿ: 3 ಸಾವಿರ ಎಕರೆ ಆಸ್ತಿಯನ್ನು ಗಣಿ ಉದ್ಯಮಿಯೊಬ್ಬರು ಮಠಕ್ಕೆ ದಾನವಾಗಿ ನೀಡಿದ್ದಾರೆ. ರಾಜಸ್ಥಾನದ ಕಲ್ಲಿದ್ದಲು ಮತ್ತು ಚಿನ್ನದ ಅದಿರು ಗಣಿ ಮಾಲೀಕ ಪಿ.ಬಿ.ಓಸ್ವಾಲ್ ಜೈನ್ ಎಂಬವರು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಪಾಲನಹಳ್ಳಿ ಮಠದ ಪೀಠಾಧ್ಯಕ್ಷ ಡಾ.ಸಿದ್ದರಾಜ ಸ್ವಾಮೀಜಿಗೆ ಆಸ್ತಿಯ ಪತ್ರಗಳನ್ನು ಹಸ್ತಾಂತರಿಸಿದ್ದಾರೆ.
ಆಸ್ತಿ ದಾನ ನೀಡಿದ ಉದ್ಯಮಿ ಪಿ.ಬಿ.ಓಸ್ವಾಲ್ ಜೈನ್ ಮಾತನಾಡಿ, “ಕಳೆದ 20 ವರ್ಷಗಳಿಂದ ಪಾಲನಹಳ್ಳಿ ಮಠದ ಡಾ.ಸಿದ್ದರಾಜು ಸ್ವಾಮೀಜಿ ಅವರ ಜನೋಪಯೋಗಿ ಸಮಾಜಮುಖಿ ಸೇವಾ ಕಾರ್ಯಗಳನ್ನು ಹತ್ತಿರದಿಂದ ಗಮನಿಸಿದ್ದೇನೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು, ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿರುವ ಸ್ವಯಾರ್ಜಿತವಾಗಿ ಸಂಪಾದಿಸಿರುವ 3 ಸಾವಿರ ಎಕರೆಯಲ್ಲಿ ಗಣಿಗಾರಿಕೆ ನಡೆಸಿಕೊಂಡು ಬರುತ್ತಿದ್ದೇನೆ. ಹಾಗೆಯೇ ಮುಂಬೈನ ವಿವಿಧೆಡೆಗಳಲ್ಲಿ ನನಗೆ ಸೇರಿರುವ ಕಟ್ಟಡ ಮತ್ತು ಸ್ಥಿರ, ಚರ ಆಸ್ತಿಯಲ್ಲಿ ಗಳಿಸಿರುವ ಆಸ್ತಿಗೆ ಪ್ರತೀ ವರ್ಷವೂ ಚಾಚೂ ತಪ್ಪದೆ 500 ಕೋಟಿ ಆದಾಯ ತೆರಿಗೆ ಪಾವತಿಸಿದ್ದೇನೆ” ಎಂದು ಹೇಳಿದರು.
“ನನಗೆ ಸೇರಿರುವ ಗಣಿಗಾರಿಕೆ ಮತ್ತು ಜರ್ಮನಿ, ಜಪಾನ್, ಕೊರಿಯಾ, ಆಸ್ಟ್ರೇಲಿಯಾ ಇತರೆ ದೇಶಗಳಲ್ಲಿನ ವ್ಯಾಪಾರ ವಹಿವಾಟನ್ನು ಪೂರ್ಣವಾಗಿ ಡಾ.ಸಿದ್ದರಾಜು ಸ್ವಾಮೀಜಿ ಅವರ ಹೆಸರಿಗೆ ನೋಂದಣಿ ಮಾಡಿಸಿದ್ದು, ಇಂದು ಬ್ಯಾಂಕ್ ವಹಿವಾಟು ಮತ್ತು ಭೂಮಿ ಹಾಗೂ ವಾಣಿಜ್ಯಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಹಸ್ತಾಂತರಿಸಿದ್ದೇನೆ. ನನಗೆ ಸೇರಿರುವ ಚರ ಮತ್ತು ಸ್ಥಿರ ಆಸ್ತಿ, ಹಣ, ವ್ಯಾಪಾರ ವಹಿವಾಟು ಸಮಸ್ತ ಸಂಪತ್ತು ಇಂದಿನಿಂದ ಡಾ.ಸಿದ್ದರಾಜು ಸ್ವಾಮೀಜಿ ಅವರಿಗೆ ಸೇರಿದೆ. ಇದು ಸಮಾಜೋಪಯೋಗಿ ಸೇವೆಗೆ ಬಳಕೆಯಾಗಲಿ” ಎಂದರು.
ಪಾಲನಹಳ್ಳಿ ಮಠದ ಡಾ.ಸಿದ್ದರಾಜು ಸ್ವಾಮೀಜಿ ಮಾತನಾಡಿ, “ಉದ್ಯಮಿ ಪಿ.ಬಿ.ಓಸ್ವಾಲ್ ಜೈನ್ ಅವರು ಸ್ವಇಚ್ಛೆಯಿಂದ ಆಸ್ತಿ ದಾನವಾಗಿ ನೀಡಿದ್ದಾರೆ. ಈ ಆಸ್ತಿಯನ್ನು ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಆಯುರ್ವೇದ ಪರಂಪರೆ ಮುಂದುವರೆಸಲು ಹಾಗೂ ಬಡವರಿಗೆ ಅನುಕೂಲವಾಗುವ ಉದ್ದೇಶದಿಂದ ನೀಡಿದ್ದು, ಮುಂದಿನ ದಿನಗಳಲ್ಲಿ ಅದರ ಸದುಪಯೋಗ ಪಡಿಸಿಕೊಳ್ಳಲಾಗುವುದು” ಎಂದು ತಿಳಿಸಿದರು.